ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಲು ಫೆಬ್ರವರಿ 10 ರಿಂದ ಮೂರು ದಿನಗಳ ಕಾಲ ರಾಜ್ಯ ಬಿಜೆಪಿಯಿಂದ ಗ್ರಾಮ ಚಲೋ ಅಭಿಯಾನ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇದೇ ವೇಳೆ ರಾಜ್ಯ ಸರ್ಕಾರದ ವೈಫಲ್ಯ ಬಗ್ಗೆ ಖಂಡಿಸಿ ಪ್ರತಿ ಮನೆಗೂ ಮಾಹಿತಿ ನೀಡಲಾಗುವುದು.
ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಾಜಿ ಸಚಿವ ಸುನಿಲ್ ಕುಮಾರ್ ಅಭಿಯಾನದ ಸಂಚಾಲಕರಾಗಿದ್ದಾರೆ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಗ್ರಾಮ ಚಲೋ ಅಭಿಯಾನ ಕೈಗೊಳ್ಳಲಾಗಿದೆ.
ಫೆಬ್ರವರಿ 10, 11, 12ರಂದು ಪ್ರತಿ ಹಳ್ಳಿಯಲ್ಲಿಯೂ ಅಭಿಯಾನ ನಡೆಯಲಿದೆ. ರಾಜ್ಯದ 28,000 ಕಂದಾಯ ಗ್ರಾಮಗಳು, 19 ಸಾವಿರ ನಗರ ಬೂತ್ ಗಳನ್ನು ಸಂಪರ್ಕಿಸಲು ಉದ್ದೇಶಿಸಲಾಗಿದ್ದು, 40,000 ಕಾರ್ಯಕರ್ತರನ್ನು ಅಭಿಯಾನದಲ್ಲಿ ಜೋಡಿಸಲು ತೀರ್ಮಾನಿಸಲಾಗಿದೆ.