ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಏ.18 ರವರೆಗೆ ವಿಸ್ತರಿಸಿದೆ.
ಅವರನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಡದ ನಡುವೆಯೂ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಈ ಹಿಂದೆ ನೀಡಲಾಗಿದ್ದ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಮನೀಶ್ ಸಿಸೋಡಿಯಾ ಅವರನ್ನು ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ಬಳಿಕ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ನ್ಯಾಯಾಂಗ ಬಂಧನವನ್ನು ವಿಸ್ತರಿಸಿದ್ದಾರೆ.
ಈ ಪ್ರಕರಣದಲ್ಲಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ಸಹ ಆರೋಪಿ ಸಂಜಯ್ ಸಿಂಗ್ ಸಹ ವಿಚಾರಣೆ ಗಾಗಿ ನ್ಯಾಯಾ ಲಯಕ್ಕೆ ಹಾಜರಾಗಿದ್ದರು. ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಫೆಬ್ರವರಿ 26, 2023 ರಂದು ಬಂಧಿಸಿತು. ಮಾರ್ಚ್ 9, 2023 ರಂದು ಸಿಬಿಐ ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಇಡಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದೆ.
ಮಾಜಿ ಸಚಿವ ಫೆಬ್ರವರಿ 28, 2023 ರಂದು ದೆಹಲಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.
ದೆಹಲಿ ಅಬಕಾರಿ ನೀತಿಯನ್ನು ಮಾರ್ಪಡಿಸುವಾಗ ಅಕ್ರಮಗಳು ನಡೆದಿವೆ ಎಂದು ಸಿಬಿಐ ಮತ್ತು ಇಡಿ ಆರೋಪಿಸಿದೆ. ನೀತಿ ಯನ್ನು ಪರವಾನಗಿದಾರರಿಗೆ ಅನುಕೂಲವಾಗುವಂತೆ ವಿಸ್ತರಿಸಲಾಗಿದೆ. ಪರವಾನಗಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಅಥವಾ ಕಡಿಮೆ ಮಾಡಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಪರವಾನಗಿಗಳನ್ನು ವಿಸ್ತರಿಸಲಾಗಿದೆ ಎಂಬ ಆರೋಪಗಳಿವೆ.
ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಅರವಿಂದ್ ಕೇಜ್ರಿವಾಲ್ ಅವರ ಕಸ್ಟಡಿಯನ್ನು ಏ.15 ರವರೆಗೆ ವಿಸ್ತರಿಸಿ, ಅವರ ಮುಂದಿನ ವಿಚಾರಣೆಯವರೆಗೆ ತಿಹಾರ್ ಜೈಲಿಗೆ ಕಳುಹಿಸಿದೆ. ಮನೀಶ್ ಸಿಸೋಡಿಯಾ ಅವರಂತೆ, ಕೇಜ್ರಿವಾಲ್ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವುದಿಲ್ಲ ಮತ್ತು ಜೈಲಿನಿಂದಲೇ ದೆಹಲಿ ಸರ್ಕಾರ ನಡೆಸುವುದನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
ರಾಜಕೀಯ ಲಾಭಕ್ಕಾಗಿ ಬಿಜೆಪಿ ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ಮಾರ್ಚ್ 28 ರಂದು ದೆಹಲಿ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ್ದ ಅವರವಿಂದ್ ಕೇಜ್ರಿವಾಲ್ , ಇಡಿ ತಮ್ಮ ವರದಿಯಲ್ಲಿ ತನ್ನ ವಿರುದ್ಧ ಯಾವುದೇ ದೃಢವಾದ ಆರೋಪಗಳನ್ನು ಮಾಡಿಲ್ಲ. ನನ್ನ ಬಂಧನಕ್ಕೆ ಅವರ ಬಳಿ ಯಾವುದೇ ಆಧಾರವಿಲ್ಲ ಎಂದು ಹೇಳಿದ್ದಾರೆ. ಆದರೆ, ಕೇಜ್ರಿವಾಲ್ ಅವರ ಮನೆಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳನ್ನು ವಿಶ್ಲೇಷಿಸಲು ಅವರ ಕಸ್ಟಡಿಯನ್ನು ವಿಸ್ತರಿಸುವಂತೆ ಇಡಿ ಮನವಿ ಮಾಡಿತ್ತು. ಅಬಕಾರಿ ನೀತಿ ಪ್ರಕರಣದ ಕೆಲವು ಆರೋಪಿಗಳೊಂದಿಗೆ ಅರವಿಂದ್ ಕೇಜ್ರಿವಾಲ್ ಅವರ ಸಂಪರ್ಕವಿದೆ ಎಂದು ಆರೋಪಿಸಿದೆ.