ಅಹಮದಾಬಾದ್: ರಜಪೂತ ಕರ್ಣಿ ಸೇನಾದ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನಾ ಅವರನ್ನು ಶನಿವಾರ ಬಂಧಿಸಲಾಗಿದೆ.
ರಜಪೂತ ದೊರೆಗಳ ಬಗ್ಗೆ ‘ಆಕ್ಷೇಪಾರ್ಹ’ ಎನ್ನಲಾದ ಮಾತುಗಳನ್ನು ಆಡಿದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಕೋಟ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರಶೋತ್ತಮ್ ರೂಪಾಲಾ ವಿರುದ್ಧ ಕ್ಷತ್ರಿಯ ಸಮುದಾಯ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಅಹಮ ದಾಬಾದ್ಗೆ ಬಂದಿದ್ದ ಮಹಿಪಾಲ್ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನೆ ಬಳಿಕ ಮಹಿಪಾಲ್ ಸಿಂಗ್ ಅವರು ಕ್ಷತ್ರಿಯ ಸಮುದಾಯ ಮಹಿಳೆಯರನ್ನು ಭೇಟಿಯಾಗಲಿದ್ದರು. ಆದರೆ, ಅದಕ್ಕೂ ಮುನ್ನವೇ ಮಹಿಪಾಲ್ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪಾಲಾ ಅವರು ಈಗಾಗಲೇ ಮೂರು ಬಾರಿ ಕ್ಷಮೆಯಾಚಿಸಿರುವುದರಿಂದ ಅವರನ್ನು ಮನ್ನಿಸಿ ಎಂದು ಗುಜರಾತ್ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್ ಈಚೆಗೆ ಮನವಿ ಮಾಡಿದ್ದರು.
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಮ್ಮುಖದಲ್ಲಿ ರಜಪೂತ ಸಮುದಾಯದ ಮುಖಂಡರೊಂದಿಗೆ ಪಾಟೀಲ್ ಸಭೆ ನಡೆಸಿ ದ್ದರು. ಪ್ರಕರಣಕ್ಕೆ ಅಂತ್ಯ ಹಾಡುವ ಸಲುವಾಗಿ ಪರಿಹಾರ ಕಂಡುಕೊಳ್ಳಲು ಸಮುದಾಯದ ಸಮನ್ವಯ ಸಮಿತಿ ಸಭೆಯನ್ನು ಬುಧವಾರ ಮಧ್ಯಾಹ್ನ ಕರೆಯ ಲಾಗಿದೆ ಎಂದು ಪಟೇಲ್ ತಿಳಿಸಿದ್ದರು.