ಶೀಘ್ರದಲ್ಲೇ ಸಿಎಎ ಕಾನೂನು ಜಾರಿ -ಕೇಂದ್ರ ಸಚಿವರ ಹೇಳಿಕೆ
ಕೋಲ್ಕತಾ:
ಏಳು ದಿನದ ಒಳಗೆ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಶಂತನು ಠಾಕೂರ್ ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮಾತನಾಡುತ್ತ, ಕೇಂದ್ರ ಸರ್ಕಾರ ಸಿಎಎ ಅನ್ನು ಜಾರಿಗೊಳಿಸಲಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿರಿಸಿಕೊಂಡು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಹೊಸ ವರ್ಷದ ಮೊದಲ ತಿಂಗಳಿನಲ್ಲೇ, ಕೇಂದ್ರ ಸಚಿವರೊಬ್ಬರು ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಂದಿನ ಏಳು ದಿನಗಳಲ್ಲಿ ಪಶ್ಚಿಮ ಬಂಗಾಳ ಮಾತ್ರವಲ್ಲ, ದೇಶಾದ್ಯಂತ ಸಿಎಎ ಜಾರಿಯಾಗಲಿದೆ ಎಂಬ ಭರವಸೆ ನೀಡುತ್ತೇನೆ ಎಂದು ಠಾಕೂರ್ ಬಂಗಾಳದ ದಕ್ಷಿಣ 24 ಪರಾಗಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ತಿಳಿಸಿರುವುದಾಗಿ ವರದಿಯಾಗಿದೆ.
ಸಿಎಎ ಕಾನೂನಿನ ಉದ್ದೇಶವೇನು?
ಸಿಎಎ ಕಾನೂನು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಮೂರು ನೆರೆಯ ರಾಷ್ಟ್ರಗಳ ಮುಸ್ಲಿಂ ಸಮುದಾಯ ಹೊರತುಪಡಿಸಿ (ಯಾಕೆಂದರೆ ಮುಸ್ಲಿಮರು ಆ ದೇಶದಲ್ಲಿ ಬಹುಸಂಖ್ಯಾತರಾಗಿದ್ದಾರೆ) ಆರು ಸಮುದಾಯಗಳಿಗೆ ತ್ವರಿತ ಪೌರತ್ವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಿಎಎ ಕಾನೂನನ್ನು ಈಗಾಗಲೇ ಅನುಮೋದಿಸಲಾಗಿದ್ದು, ಆದರೆ ಅದನ್ನು ಜಾರಿಗೊಳಿಸುವ ನಿಯಮಗಳನ್ನು ಇನ್ನೂ ತಿಳಿಸಲಾಗಿಲ್ಲ, ಸಚಿವರ ಈ ಹೇಳಿಕೆಯಿಂದ ಶೀಘ್ರದಲ್ಲೇ ಕಾನಾನ್ಮಕ ಸ್ಪಷ್ಠನೆ ಸಿಗುವ ಸಾಧ್ಯತೆ ಇದೆ.
2020 ರಿಂದ ಗೃಹ ಸಚಿವಾಲಯವು ನಿಯಮಗಳ ರಚನೆಗಾಗಿ ಸಂಸದೀಯ ಸಮಿತಿಗಳಿಂದ ನಿಯಮಿತ ಮಧ್ಯಂತರಗಳಲ್ಲಿ ವಿಸ್ತರಣೆಗಳನ್ನು ತೆಗೆದುಕೊಳ್ಳುತ್ತಿದೆ. ಸಂಸತ್ ಕಾನೂನನ್ನು ಅಂಗೀಕರಿಸಿದ ನಂತರ ಪ್ರತಿಭಟನೆಗಳು ನಡೆದಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕುವ ಪೊಲೀಸ್ ಕ್ರಮದ ಸಮಯದಲ್ಲಿ ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು