ಲಕ್ನೋ: ಉತ್ತರಪ್ರದೇಶದಲ್ಲಿ ದಂಪತಿ ಮತ್ತು ಅವರ ಐದು ವರ್ಷದ ಮಗುವನ್ನು ಹೊತ್ತೊಯ್ಯುತ್ತಿದ್ದ ಮೋಟಾರ್ ಸೈಕಲ್ ಗೆ ಎಸ್‍ಯುವಿ ಚಾಲಕ ಡಿಕ್ಕಿ ಹೊಡೆದು, ಫೆಂಡರ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡಿದ್ದ ಬೈಕ್ ಸವಾರ ನನ್ನು ಮೂರು ಕಿ.ಮಿವರೆಗೆ ಎಳೆದೊಯ್ದಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದು, ಪತ್ನಿ ಮತ್ತು ಮಗು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವೀರೇಂದ್ರ ಕುಮಾರ್ ಅವರು ಪತ್ನಿ ಮತ್ತು ಐದು ವರ್ಷದ ಮಗನೊಂದಿಗೆ ರಾಯ್ ಬರೇಲಿಯಿಂದ ದಾಲ್ಮೌ ಪಟ್ಟಣಕ್ಕೆ ಮನೆಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಇನ್ನೋವಾ ಅವರ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅವರ ಪತ್ನಿ ಮತ್ತು ಮಗ ಬೈಕ್‍ನಿಂದ ಹಾರಿಹೋದಾಗ, ಅಪಘಾತದ ಪರಿಣಾಮ ಎಸ್‍ಯುವಿ ಮುಂಭಾಗದ ಭಾಗಗಳು ಸುಕ್ಕುಗಟ್ಟಿದವು ಮತ್ತು ವೀರೇಂದ್ರ ಬಲ ಫೆಂಡರ್ ಮತ್ತು ಚಕ್ರದ ನಡುವೆ ಸಿಲುಕಿಕೊಂಡರು.
ಅಪಘಾತದ ನಂತರ ಚಾಲಕ ನಿಲ್ಲಿಸದೆ ವೀರೇಂದ್ರನನ್ನು ಕಾರಿನೊಂದಿಗೆ ಸುಮಾರು 3 ಕಿ.ಮೀ ಎಳೆದೊಯ್ದಿದ್ದಾನೆ ಎಂದು ಅಕಾರಿಗಳು ತಿಳಿಸಿದ್ದಾರೆ. ಕೊನೆಗೆ ಆತ ನಿಲ್ಲಿಸಿದಾಗ ದಾರಿಹೋಕರು ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವೀರೇಂದ್ರ, ಅವರ ಪತ್ನಿ ರೂಪಾಲ್ ಮತ್ತು ಪುತ್ರ ಅನುರಾಗ್ ಅವರನ್ನು ರಾಯ್ ಬರೇಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಂತರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರ್ಗಮಧ್ಯೆ ವೀರೇಂದ್ರ ಮೃತಪಟ್ಟಿದ್ದು, ಅವರ ಪತ್ನಿ ಮತ್ತು ಮಗು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲಾಲ್‍ಗಂಜ್ ಠಾಣಾಧಿಕಾರಿ ಶಿವಶಂಕರ್ ಸಿಂಗ್ ತಿಳಿಸಿದ್ದಾರೆ.