ರಷ್ಯಾದ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI Agent) ಏಜೆಂಟ್ನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಸ್ಟಿಎಫ್ ) ಬಂಧಿಸಿದ್ದು, ಈತ ಭಾರತೀಯನಾಗಿದ್ದರೂ ಪಾಕ್ ಬೇಹುಗಾರಿಕ ಸಂಸ್ಥೆಗೆ ಗೌಪ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಂಧಿತ ಏಜೆಂಟ್ ನನ್ನು ಸತ್ಯೇಂದ್ರ ಸಿವಾಲ್ ಎಂದು ಗುರುತಿಸ ಲಾಗಿದ್ದು, ಈತ 2021ರಿಂದ ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ ನೇಮಿಸಲಾಗಿತ್ತು. ಅಲ್ಲಿ ಭಾರತ ಮೂಲದ ಭದ್ರತಾ ಸಹಾಯಕರಾಗಿ (ಐಬಿಎಸ್‌ಎ) ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯೇಂದ್ರನ ಬಗ್ಗೆ ತನ್ನ ಮೂಲ ಗಳಿಂದ ಸುಳಿವು ಪಡೆದಿತ್ತು. ಇದೀಗ ಮೀರತ್ನಲ್ಲಿ ಆತನನ್ನು ಬಂಧಿಸಿದೆ. ಉತ್ತರ ಪ್ರದೇಶದ ಎಟಿಎಸ್ ಸಿವಾಲ್ ನನ್ನು ವಿಚಾರಣೆ ನಡೆಸಿದ್ದು, ಆರಂಭ ದಲ್ಲಿ ಅತೃಪ್ತಿಕರ ಉತ್ತರಗಳನ್ನು ನೀಡಿದ್ದ ಆತನನ್ನು ತೀವ್ರ ವಿಚಾರಗೊಳಪಡಿಸಿದ ಬಳಿಕ ಬೇಹುಗಾರಿಕೆಯನ್ನು ಒಪ್ಪಿಕೊಂಡಿದ್ದಾನೆ. ಆತ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಭಾಗಿಯಾಗಿದ್ದ ಎಂದು ಉತ್ತರ ಪ್ರದೇಶದ ಎಸ್ಟಿಎಫ್ ತಿಳಿಸಿದೆ.