ಪಟ್ನಾ: ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶ ನಡೆಸುವುದರೊಂದಿಗೆ ‘ಭಾರತ ಜೋಡೊ ನ್ಯಾಯ ಯಾತ್ರೆ’ಯನ್ನು ಮತ್ತೆ ಮುಂದುವರಿಸಲಿದ್ದಾರೆ.
ಪಕ್ಷದ ಹಿರಿಯ ನಾಯಕ ಮತ್ತು ಎಂಎಲ್‌ಸಿ ಪ್ರೇಮ್ ಚಂದ್ರ ಮಿಶ್ರಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಸಮಾವೇಶವನ್ನು ದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
‘ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ವಿಮಾನದ ಮೂಲಕ ಗಯಾ ತಲುಪಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಔರಂಗಾ ಬಾದ್‌ಗೆ ತೆರಳಲಿದ್ದಾರೆ. ನಂತರ ಯಾತ್ರೆ ಮುಂದುವರಿಯಲಿದೆ’ ಎಂದು ಮಿಶ್ರಾ ಹೇಳಿದ್ದಾರೆ.
ರಾಹುಲ್ ಅವರು ನ್ಯಾಯ ಯಾತ್ರೆಯ ಮೊದಲ ಹಂತದ ವೇಳೆ ಹದಿನೈದು ದಿನಗಳ ಹಿಂದೆ ಬಿಹಾರದ ಸೀಮಾಂಚಲ್ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಸಂಚರಿಸಿದ್ದರು.
ಇಂದು ಸಮಾವೇಶ ಮುಗಿದ ಬಳಿಕ ರಾಹುಲ್ ಅವರು ಟಿಕಾರಿ ವಿಧಾನಸಭಾ ವ್ಯಾಪ್ತಿಯಲ್ಲಿ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಟಿಕಾರಿ ವಿಧಾನಸಭೆಯು ಗಯಾ ಜಿಲ್ಲೆಗೆ ಸೇರಿದೆಯಾದರೂ, ಲೋಕಸಭೆಯಲ್ಲಿ ಔರಂಗಾಜೇಬ್ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ.