ಗುವಾಹಟಿ: ಅಸ್ಸಾಂ ‘ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯ್ದೆ 1935 ಅನ್ನು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದ ಅಸ್ಸಾಂ ಸರ್ಕಾರ ರದ್ದುಗೊಳಿಸಲು ನಿರ್ಧರಿಸಿದೆ.
ಅಸ್ಸಾಂನಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಲಾಗುತ್ತಿದೆ.
ಸಚಿವ ಜಯಂತ್ ಮಲ್ಲಬರುವ, ಮುಸ್ಲಿಂ ವಿವಾಹ ಕಾಯ್ದೆ ರದ್ದತಿ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರು. ಏಕರೂಪ ನಾಗರಿಕ ಸಂಹಿತೆ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ. ಇನ್ನು ಮುಂದೆ ರಾಜ್ಯದಲ್ಲಿ ಮುಸ್ಲಿಂ ವಿವಾಹ ಮತ್ತು ವಿಚ್ಛೇದನಗಳ ನೋಂದಣಿಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ನೋಂದಣಾಧಿಕಾರಿಗಳು ಮಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಸದ್ಯ ಮುಸ್ಲಿಂ ವಿವಾಹ, ವಿಚ್ಛೇದನ ನೋಂದಣಿ ಕಾಯ್ದೆಯಡಿ ಕಾರ್ಯನಿರ್ವಹಿಸುತ್ತಿರುವ 94 ಮುಸ್ಲಿಂ ರಿಜಿಸ್ಟ್ರಾರ್ಗಳನ್ನು ತೆಗೆದುಹಾಕಲಾಗು ವುದು. ಅವರೆಲ್ಲರಿಗೂ ತಲಾ 2 ಲಕ್ಷ ರೂಪಾಯಿಗಳ ಒಂದು ಬಾರಿಯ ಪರಿಹಾರ ನೀಡಲಾಗುವುದು ಎಂದು ಮಲ್ಲಬರುವ ಹೇಳಿದರು.
ಈ ಕಾಯ್ದೆಯು ವಧು ಮತ್ತು ವರರು ಕ್ರಮವಾಗಿ 18 ಮತ್ತು 21 ರ ಕಾನೂನುಬದ್ಧ ವಯಸ್ಸನ್ನು ತಲುಪದಿದ್ದರೂ ಸಹ ವಿವಾಹ ನೋಂದಣಿಗೆ ಅವಕಾಶ ನೀಡುವ ನಿಬಂಧನೆಗಳನ್ನು ಒಳಗೊಂಡಿತ್ತು.
ಉತ್ತರಾಖಂಡವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಕಾನೂನನ್ನು ಜಾರಿಗೊಳಿಸಿತ್ತು. ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟ ಮೊದಲ ರಾಜ್ಯವಾಗಿದೆ.