Advertisements

ಚುನಾವಣೆ ಬಾಂಡ್ ಹೆಸರಿನಲ್ಲಿ ಬಿಜೆಪಿ ಹೇಗೆ ಹಣ ಮಾಡುತ್ತಿದೆ ಎಂಬುದು ಬಹಿರಂಗ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಪ್ರಧಾನಮಂತ್ರಿಗಳು ಸತ್ಯಹರಿಶ್ಚಂದ್ರನಂತೆ ಮಾತನಾಡುತ್ತಾರೆ. ನಾ ಖಾವೂಂಗಾ ನಾ ಖಾನೇದೂಂಗಾ ಎಂದು ಹೇಳುತ್ತಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್ ಬಿಜೆಪಿ ಚುನಾವಣೆ ಬಾಂಡ್ ಹೆಸರಿನಲ್ಲಿ ಬಿಜೆಪಿ ಹೇಗೆ ಹಣ ಮಾಡುತ್ತಿದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಎಸ್ ಬಿಐ ನೀಡಿರುವ ಅಂಕಿ ಅಂಶಗಳ ಪ್ರಕಾರ, ಶೇ.50ರಷ್ಟು ದೇಣಿಗೆಯನ್ನು ಬಿಜೆಪಿ ಪಡೆದರೆ, ಕಾಂಗ್ರೆಸ್ ಪಕ್ಷ ಕೇವಲ ಶೇ.11ರಷ್ಟು ದೇಣಿಗೆ ಪಡೆದಿದೆ. ಬಿಜೆಪಿಯವರು ಇಷ್ಟು ದೊಡ್ಡ ಪ್ರಮಾಣದಲ್ಲಿ ದೇಣಿಗೆ ಪಡೆಯಲು ಹೇಗೆ ಸಾಧ್ಯ? ಇದರಲ್ಲಿ ಅನೇಕ ನಕಲಿ ದೇಣಿಗೆದಾರರಿದ್ದಾರೆ. ಇವರಲ್ಲಿ ಬಹುತೇಕರು ಇಡಿ, ಆದಾಯ ತೆರಿಗೆ ಹಾಗೂ ಇತರೆ ತನಿಖಾ ಸಂಸ್ಥೆಗಳ ಪ್ರಕರಣ ಎದುರಿಸುತ್ತಿರುವವರು. ಮೊದಲು ಇಡಿ ದಾಳಿ ನಡೆಸಿ ನಂತರ ಮೋದಿ ಹಾಗೂ ಅವರ ಪಕ್ಷ ಹೆಚ್ಚಿನ ದೇಣಿಗೆ ನೀಡಲು ಬೆದರಿಕೆ ಹಾಕುತ್ತಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಖಾತೆಯಲ್ಲಿರುವ 300 ಕೋಟಿ ಹಣವನ್ನು ತಡೆ ಹಿಡಿಯಲಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಹೇಗೆ ಸಾಧ್ಯ? ವಿರೋಧ ಪಕ್ಷಗಳ ಖಾತೆ ತಡೆದರೆ ಚುನಾವಣೆ ನಡೆಸಲು ಹೇಗೆ ಸಾಧ್ಯ? ಹೀಗಾಗಿ ಈ ವಿಚಾರವಾಗಿ ಉನ್ನತ ಮಟ್ಟದ ತನಿಖೆಯಾಗಬೇಕು. ಇಲ್ಲದಿದ್ದರೆ ಸತ್ಯಾಂಶ ಹೊರಬರುವುದಿಲ್ಲ. ಈ ಸಂದರ್ಭದಲ್ಲಿ ಅವರ ಖಾತೆಯನ್ನು ತಡೆ ಹಿಡಿಯಬೇಕು.

ಇಡಿ ಸಿಬಿಐ ದಾಳಿ ನಂತರ ಬಿಜೆಪಿ ಸೇರಿದ ನಾಯಕರು ನಿರಪರಾಧಿಗಳಾಗಿ, ಅವರ ಪಕ್ಷದಲ್ಲಿ ಸ್ಥಾನಮಾನ ಪಡೆಯುತ್ತಿದ್ದಾರೆ. ಇದೇ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಕಳಂಕಿತರಾಗಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್ ಬಿಜೆಪಿಯ ಮೋಸವನ್ನು ಬಹಿರಂಗಪಡಿಸಿದೆ.

ಈ ವಿಚಾರದಲ್ಲಿ ಪ್ರಧಾನಮಂತ್ರಿಗಳು ಹೊಣೆಗಾರಿಕೆ ಹೊತ್ತುಕೊಳ್ಳಬೇಕು. ಇದು ಮೋದಿ ಸರ್ಕಾರ, ಮೋದಿ ಪಕ್ಷ ಎಂದು ಎಲ್ಲಾ ವಿಚಾರದಲ್ಲೂ ತಮ್ಮ ಹೆಸರನ್ನೇ ಬಳಸುತ್ತಾರೆ. ಮೋದಿ ಅವರು ತಮ್ಮದು 56 ಇಂಚಿನ ಎದೆ ಎಂದು ಹೇಳಿಕೊಳ್ಳುತ್ತಾರೆ. ಅದೇ ರೀತಿ ಬಿಜೆಪಿ ಪಕ್ಷದಲ್ಲಿ ಎಲ್ಲವೂ ತನ್ನಿಂದಲೇ ಎಂದು ಹೇಳಿಕೊಳ್ಳುತ್ತಾರೆ. ದೇಶದಲ್ಲಿ ಏನೇ ಆಗಿದ್ದರೂ ಅದು ತನ್ನಿಂದಲೇ ಎಂದು ಹೇಳುತ್ತಾರೆ. ಅವರ ಪ್ರಕಾರ 2014ರ ನಂತರವಷ್ಟೇ ದೇಶ ಸ್ವಾತಂತ್ರ್ಯ ಪಡೆದಿದೆ ಎನ್ನುವಂತೆ ಬಿಂಬಿಸುತ್ತಾರೆ. ಮೋದಿ ಅವರು ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದಾರೆ. ಜನರ ಮೇಲೆ ಒತ್ತಡ ಹಾಕಿ ಅವರ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳು ಇರಲೇಬಾರದು ಎಂಬ ಮನಸ್ಥಿತಿಯಲ್ಲಿ ಮೋದಿ ಅವರು ಆಡಳಿತ ನಡೆಸುತ್ತಿದ್ದಾರೆ.

Leave a Comment

Advertisements

Recent Post

Live Cricket Update