Advertisements

ಆದಿಚುಂಚನಗಿರಿಗೆ ಯದುವೀರ್ ಭೇಟಿ

ಮಂಡ್ಯ: ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಭಾನುವಾರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ, ಕಾಲಭೈರವೇಶ್ವರ ಸ್ವಾಮಿಯ ದರ್ಶನ ಪಡೆದುಕೊಂಡರು.

ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಮಠದ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು.

ಸ್ವತಃ ಆದಿಚುಂಚನಗಿರಿಯ ಪೀಠಾಧಿಪತಿಗಳಾಗಿರುವ ನಿರ್ಮಲಾನಂದನಾಥ ಸ್ವಾಮೀಜಿಯವರೇ ಬಂದು ಯದುವೀರ್ ಒಡೆಯರ್ ಅವರನ್ನು ಆದರದಿಂದ‌ ಬರಮಾಡಿಕೊಂಡಿದ್ದು, ವಿಶೇಷ ಗಮನ ಸೆಳೆಯಿತು. ಆದಿಚುಂಚಗಿರಿಯ ಕ್ಷೇತ್ರಾಧಿಪತಿ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ರಾಜ ವಂಶಸ್ಥ ಯದುವೀರ್ ಒಡೆಯರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀಕ್ಷೇತ್ರ ಆದಿಚುಂಚನಗಿರಿಯ ಪೀಠಾಧಿಪತಿ ‌ನಿರ್ಮಲಾನಂದ ನಾಥ ಸ್ವಾಮೀಜಿಯವರ ಜೊತೆ ಕೆಲಕಾಲ ಉಭಯಕುಶಲೋಪರಿಯಾಗಿ ಯದುವೀರ್ ಚರ್ಚೆ ನಡೆಸಿದರು.

ಈ ‌ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ವಿ ಸೋಮಣ್ಣ ಕೂಡ ಇಂದೇ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರಲ್ಲದೇ, ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡು ಕೆಲ ಸಮಯ ಶ್ರೀಗಳ ಜೊತೆ ಮಾತುಕತೆ ನಡೆಸಿದರು.

ಮೈಸೂರು-ಕೊಡಗು ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ‌ ಒಕ್ಕಲಿಗ ಸಮುದಾಯದ ಮತದಾರರು ಗಣನೀಯ ಪ್ರಮಾಣ ದಲ್ಲಿ ಇದ್ದಾರೆ. ಹಾಗಾಗಿ ಒಕ್ಕಲಿಗ ಸಮುದಾಯದ ಗುರುಗಳಾಗಿರುವ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು‌ ಬಿಜೆಪಿ ಅಭ್ಯರ್ಥಿಗಳಾಗಿ ರುವ ಯದುವೀರ್ ಒಡೆಯರ್ ಹಾಗು ವಿ ಸೋಮಣ್ಣ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದು ರಾಜಕೀಯವಾಗಿಯೂ ಹೆಚ್ಚಿನ ಮಹತ್ವ ಪಡೆದುಕೊಂಡಿತು.

ಏಪ್ರಿಲ್ 19 ರಿಂದ ದೇಶದಲ್ಲಿ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.

ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಹೊರಬೀಳಲಿದೆ. ಭಾರತೀಯ ಜನತಾ ಪಾರ್ಟಿ-ಬಿಜೆಪಿ ಈಗಾಗಲೇ ಕರ್ನಾಟಕದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಬದಲಾಗಿ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು.

Leave a Comment

Advertisements

Recent Post

Live Cricket Update