ಮಾಸ್ಕೋ: ರಷ್ಯಾದ ರಾಜಧಾನಿ ಮಾಸ್ಕೋದ ಮಾಲ್ ಒಂದರಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಉಗ್ರರು ಅಮಾಯಕರ ರಕ್ತ ಚೆಲ್ಲಾಡಿದ್ದಾರೆ.
ರಷ್ಯಾದ ರಾಜಧಾನಿ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಐವರು ಬಂದೂಕುಧಾರಿಗಳು ಜನರ ಗುಂಪಿನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದು, ಈ ಭಯಾನಕ ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 140ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ನಡೆದ ಸಾವಿನ ಸಂಖ್ಯೆಯ ಬಗ್ಗೆ ರಷ್ಯಾದ ಉನ್ನತ ಭದ್ರತಾ ಸಂಸ್ಥೆ ಖಚಿತ ಪಡಿಸಿದೆ.
ಘಟನೆ ನಡೆದ ಬೆನ್ನಲ್ಲೇ ಪರಿಸ್ಥಿತಿಯನ್ನು ನಿಯಂತ್ರಿಸಲು ರಷ್ಯಾದ ರಾಷ್ಟ್ರೀಯ ಗಾರ್ಡ್‌ಗಳು ಸ್ಥಳಕ್ಕೆ ತಲುಪಿದ್ದು, ಭಯೋತ್ಪಾದಕರನ್ನು ಮಟ್ಟ ಹಾಕಲು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. 50 ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು ಕೂಡ ಘಟನಾ ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಐವರು ದಾಳಿಕೋರರ ಪೈಕಿ ಒಬ್ಬನನ್ನು ಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದ ಕ್ರೋಕಸ್ ಸಿಟಿ ಹಾಲ್‌ಗೆ ಕೆಲವು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಪ್ರವೇಶಿಸಿ ದರು. ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಗುಂಡು ಹಾರಿಸಿದರು. ಸಭಾಂಗಣದಲ್ಲಿ ಗುಂಡು ಹಾರಿಸಿದ ನಂತರ, ಗ್ರೆನೇಡ್ ದಾಳಿ ಕೂಡ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ‘ಪಿಕ್ನಿಕ್’ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಲು ಕ್ರೋಕಸ್ ಸಿಟಿ ಹಾಲ್‌ನಲ್ಲಿ ಜನಸಂದಣಿ ಸೇರಿದ್ದಾಗ ಈ ದಾಳಿ ನಡೆದಿದೆ. ಈ ಸಭಾಂಗಣದಲ್ಲಿ 6200 ಜನರು ಇದ್ದರು ಎಂದು ಹೇಳಲಾಗಿದೆ.
ಯುದ್ಧದ ಉಡುಪಿನಲ್ಲಿ ಕನ್ಸರ್ಟ್ ಹಾಲ್‌ಗೆ ಪ್ರವೇಶಿಸಿದ ಕನಿಷ್ಠ ಐದು ಜನರು ಉಗ್ರರ ಗುಂಪು ಏಕಾಏಕಿ ಗುಂಡು ಹಾರಿಸಿದ್ದಾರೆ. ಈ ಭಯೋ ತ್ಪಾದಕ ದಾಳಿಯನ್ನು ಐಸಿಸ್ ತಾನು ಮಾಡಿದ್ದೆಂದು ಹೇಳಿಕೊಂಡಿದೆ ಎನ್ನಲಾಗಿದ್ದು, ಆದರೆ ಯಾವುದೇ ದೃಢೀಕರಣವನ್ನು ಸ್ವೀಕರಿಸಲಾಗಿಲ್ಲ.
ಪ್ರಸ್ತುತ, ಮಾಸ್ಕೋ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಮತ್ತು ರೈಲುಗಳ ಸಂಚಾರವನ್ನು ಸಹ ನಿಲ್ಲಿಸಲಾಗಿದೆ. ಮಾಸ್ಕೋದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ಸಹ ನಿಷೇಧಿಸಲಾಗಿದೆ.
ವರದಿಗಳ ಪ್ರಕಾರ ಕೆಲ ದಿನಗಳ ಹಿಂದೆ ಅಮೆರಿಕ ಉಗ್ರರ ದಾಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ನೀಡಿತ್ತು. ಮಾಸ್ಕೋದಲ್ಲಿ ಸಾಮೂಹಿಕ ಸಮಾರಂಭಗಳಿಗೆ ಹೋಗದಂತೆ ಅವರು ತಮ್ಮ ನಾಗರಿಕರಿಗೆ ಸಲಹೆ ನೀಡಿದ್ದರು. ಈ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಅಮೆರಿಕ ಹೇಳಿಕೆ ನೀಡಿದ್ದು, ಮಾಸ್ಕೋ ದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಉಕ್ರೇನ್ ಪಾತ್ರದ ಬಗ್ಗೆ ಯಾವುದೇ ಪ್ರಾಥಮಿಕ ಸೂಚನೆಗಳಿಲ್ಲ ಎಂದು ಹೇಳಿದೆ.