ಮುಂಬೈ: ಬಿಜೆಪಿ-ಆರ್‌ಎಸ್‌ಎಸ್ ಒಗ್ಗೂಡಿ ಸಾರ್ವತ್ರಿಕ ಚುನಾವಣೆಗಳ ಮುಂಚಿತವಾಗಿ ಕೋಮು ಉದ್ವಿಗ್ನತೆ ಉಲ್ಬಣಗೊಳಿಸಲು ಪ್ರಯತ್ನಿ ಸುವ ಚಲನಚಿತ್ರ ʼದಿ ಕೇರಳ ಸ್ಟೋರಿʼ ಪ್ರದರ್ಶಿಸಲು ರಾಷ್ಟ್ರೀಯ ಸುದ್ದಿ ಪ್ರಸಾರಕರು ಪ್ರಚಾರದ ಯಂತ್ರವಾಗಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಅದಾ ಶರ್ಮಾ ಅಭಿನಯದ ʼದಿ ಕೇರಳ ಸ್ಟೋರಿʼ ಸಿನಿಮಾ ಮತ್ತೊಮ್ಮೆ ಸದ್ದು ಮಾಡಿದೆ.
2023 ರ ಮೇ. 5ರಂದು ʼಕೇರಳ ಸ್ಟೋರಿʼ ಸಿನಿಮಾ ರಿಲೀಸ್ ಆಗಿತ್ತು. ಆರಂಭಿಕ ದಿನಗಳಲ್ಲಿ ಅಷ್ಟು ಸದ್ದು ಮಾಡದ ಸಿನಿಮಾ ವಾರದ ಬಳಿಕ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಂಡಿತ್ತು.
ಕೇರಳದ ಹಿಂದೂ ಯುವತಿ ಇಸ್ಲಾಂ ಧರ್ಮಕ್ಕೆ ಸೇರಿ ಅಲ್ಲಿಂದ ಐಸಿಸ್ ಸೇರುವ ಕಥೆಯನ್ನು ಚಿತ್ರ ಒಳಗೊಂಡಿದೆ. ಆರಂಭದಲ್ಲಿ 32 ಸಾವಿರ ಭಾರತೀಯ ಮಹಿಳೆಯರು ಈ ರೀತಿ ಐಸಿಸ್ ಸೇರಿದ್ದಾರೆ ಎಂದು ಚಿತ್ರತಂಡ ಟೀಸರ್ ನಲ್ಲಿ ಹೇಳಿತ್ತು.
ಹೀಗೆ ವಿವಾದದಿಂದ ಸದ್ದು ಮಾಡಿದ ಅದಾ ಶರ್ಮಾ ಅವರ ʼಕೇರಳ ಸ್ಟೋರಿʼ ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ಕಮಾಯಿ ಮಾಡಿತು. ಆದರೆ ಸಿನಿಮಾ ಎಷ್ಟು ಗಳಿಕೆ ಕಂಡಿತ್ತೋ ಕೆಲವರಿಂದ ಅಷ್ಟೇ ಟೀಕೆಗಳನ್ನೂ ಎದುರಿಸಿತ್ತು.
ಜೀ5 ಸಿನಿಮಾದ ಜಾಗತಿಕ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡು, ʼದಿ ಕೇರಳ ಸ್ಟೋರಿʼ ಫೆ. 16 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಓಟಿಟಿಯಲ್ಲಿ ರಿಲೀಸ್ ಮಾಡಿತ್ತು.
ಇದೀಗ ಇದೇ ಮೊದಲ ಬಾರಿಗೆ ವಿವಾದಿತ ʼಕೇರಳ ಸ್ಟೋರಿʼ ಸಿನಿಮಾ ಕಿರುತೆರೆಯಲ್ಲಿ ಪ್ರಿಮಿಯರ್ ಆಗಲಿದೆ. ಆದರೆ ಈ ಸಿನಿಮಾ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
ಚಿತ್ರದ ಟೆಲಿವಿಷನ್ ಪ್ರೀಮಿಯರ್ ಶುಕ್ರವಾರ ರಾತ್ರಿ 8 ಗಂಟೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇದು ಕೇರಳ ರಾಜ್ಯ ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.
ʼಕೇರಳ ಸ್ಟೋರಿʼ ಯಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ, ದೇವದರ್ಶಿನಿ ಮತ್ತು ವಿಜಯ್ ಕೃಷ್ಣ ಮುಂತಾದವರು ನಟಿಸಿದ್ದಾರೆ. ಸುದೀಪ್ತೋ ಸೇನ್ ನಿರ್ದೇಶನ ಮಾಡಿದ್ದು,ವಿಪುಲ್ ಅಮೃತಲಾಲ್ ಶಾ ಅವರು ನಿರ್ಮಿಸಿದ್ದಾರೆ.