ಜಲ್ಪೈಗುರಿ: ಮೂರು ದಿನಗಳ ಗಣರಾಜ್ಯೋತ್ಸವದ ವಿರಾಮದ ಬಳಿಕ ಕಾಂಗ್ರೆಸ್ನ “ಭಾರತ್ ಜೋಡೋ ನ್ಯಾಯ್ ಯಾತ್ರೆ” ಪಶ್ಚಿಮ ಬಂಗಾಳದ ಜಲ್ಪೈಗುರಿಯಿಂದ ಭಾನುವಾರ ಪುನರಾರಂಭವಾಗಲಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಯಾತ್ರೆಯು ಭಾನುವಾರ ಮಧ್ಯಾಹ್ನ 2 ಗಂಟೆಗೆ 2 ಕಿ.ಮೀ. ಪಾದಯಾತ್ರೆಯೊಂದಿಗೆ ಪುನರಾರಂಭವಾಗಲಿದ್ದು, ಸಿಲಿಗುರಿಗೆ ತೆರಳಿ ಅಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಉತ್ತರ ದಿನಾಜ್ಪುರದಲ್ಲಿ ರಾತ್ರಿ ಯಾತ್ರೆ ಸ್ಥಗಿತಗೊಂಡು ಸೋಮವಾರ ಬಿಹಾರದ ಅರಾರಿಯಾ ಜಿಲ್ಲೆಯನ್ನು ಪ್ರವೇಶಿಸ ಲಿದೆ. ಇದು ರಾಜ್ಯದ ಪೂರ್ಣಿಯಾ ಮತ್ತು ಕಿಶಾಂಗಿಂಗ್ ಜಿಲ್ಲೆಗಳನ್ನು ಒಳಗೊಳ್ಳುತ್ತದೆ, ಈ ಎಲ್ಲಾ ಸ್ಥಳಗಳಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದರು.
ಸಾಧ್ಯವಾದಲ್ಲೆಲ್ಲಾ 3- 5 ಕಿಲೋ ಮೀಟರ್ ಪಾದಯಾತ್ರೆ ನಡೆಸಲು ರಾಹುಲ್ ಗಾಂಧಿ ಬಯಸುತ್ತಿರುವ ಕಾರಣ ಈ ಜಿಲ್ಲೆಗಳಲ್ಲಿ ಪಾದಯಾತ್ರೆ ಕೂಡ ನಡೆಯಲಿದೆ. ಯಾತ್ರೆಯು ಜನವರಿ 30 ರಂದು ರಾತ್ರಿ ಬಂಗಾಳವನ್ನು ಮರುಪ್ರವೇಶಿಸು ತ್ತದೆ.