ಇಂಡಿಯಾನಾಃ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿ ನೀಲ್ ಆಚಾರ್ಯ ಅವರು ಕಾಣೆಯಾಗಿದ್ದಾರೆ ಎಂದು ಅವರ ತಾಯಿ ವರದಿ ಮಾಡಿದ ಕೆಲವೇ ಗಂಟೆಗಳ ನಂತರ ಭಾನುವಾರ ಮಗ ಶವವಾಗಿ ಪತ್ತೆಯಾಗಿದ್ದಾರೆ.
ಟಿಪ್ಪೆಕಾನೋ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಪಶ್ಚಿಮ ಲಫಯೆಟ್ಟೆ 500 ಆಲಿಸನ್ ರಸ್ತೆಯಲ್ಲಿರುವ ಕ್ಯಾಂಪಾಸ್ನಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು, ಭಾನುವಾರ ಮುಂಜಾನೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ, ಪರ್ಡ್ಯೂ ಕ್ಯಾಂಪಸ್ನಲ್ಲಿ “ಕಾಲೇಜು-ವಯಸ್ಸಿನ ಪುರುಷ” ನ ಶವ ಕಂಡುಂಬಂದಿತು
ಮೃತದೇಹವನ್ನು ಪರ್ಡ್ಯೂ ವಿಶ್ವವಿದ್ಯಾಲಯದ ಜಾನ್ ಮಾರ್ಟಿನ್ಸನ್ ಆನರ್ಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಡೇಟಾ ಸೈನ್ಸ್ನಲ್ಲಿ ಡಬಲ್ ಮೇಜರ್ ಆಗಿರುವ ನೀಲ್ ಆಚಾರ್ಯರವರ ಶವ ಎಂದು ಗುರುತಿಸಲಾಗಿದೆ.
ಭಾನುವಾರ, ನೀಲ್ ಅವರ ತಾಯಿ ಗೌರಿ ಆಚಾರ್ಯ ಅವರು X ನಲ್ಲಿ ಪೋಸ್ಟ್ ನಲ್ಲಿ ಮನವಿ ಮಾಡಿದ್ದರು, “ನಮ್ಮ ಮಗ ನೀಲ್ ಆಚಾರ್ಯ ನಿನ್ನೆ ಜನವರಿ 28 ರಿಂದ ಕಾಣೆಯಾಗಿದ್ದಾನೆ (12:30 AM EST) ಅವನು ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾನೆ. ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಅವನನ್ನು ಬಿಟ್ಟುಹೋದ ಉಬರ್ ಚಾಲಕನು ಅವನನ್ನು ಕೊನೆಯದಾಗಿ ನೋಡಿದ್ದಾನೆ, ಆ ನಂತರ ಆತನ ಸಂಪರ್ಕ ಸಾಧ್ಯವಾಗುತ್ತಿಲ್ಲ, ನಾವು ಆತನ ಬಗ್ಗೆ ಎಲ್ಲಾ ರೀತಿಯಲ್ಲಿಯೂ ಹುಡುಕುತ್ತಿದ್ದೇವೆ. ನಿಮಗೆ ಏನಾದರೂ ತಿಳಿದಿದ್ದರೆ ದಯವಿಟ್ಟು ನಮಗೆ ಸಹಾಯ ಮಾಡಿ ” ಎಂದು ಮನವಿ ಮಾಡಿಕೊಂಡಿದ್ದರು.
ಚಿಕಾಗೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಆಕೆಯ ಪೋಸ್ಟ್ಗೆ ಉತ್ತರಿಸುತ್ತಾ, “ಕಾನ್ಸುಲೇಟ್, ಪರ್ಡ್ಯೂ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮತ್ತು ನೀಲ್ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ರಾಯಭಾರಿ ಕಚೇರಿಯು ಸಾಧ್ಯವಿರುವ ಎಲ್ಲ ರೀತಿಯ ಬೆಂಬಲ ಮತ್ತು ಸಹಾಯವನ್ನು ನೀಡುತ್ತದೆ ” ಎಂದು ಪ್ರತಿಕ್ರಿಯಿಸಿದೆ.
ವಿಶ್ವವಿದ್ಯಾನಿಲಯದಿಂದ ಸ್ವತಂತ್ರವಾದ ಮಲ್ಟಿಮೀಡಿಯಾ ಏಜೆನ್ಸಿಯಾದ ಪರ್ಡ್ಯೂ ಎಕ್ಸ್ಪೋನೆಂಟ್ ಪ್ರಕಾರ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಕ್ರಿಸ್ ಕ್ಲಿಫ್ಟನ್ ಸೋಮವಾರ ಇಮೇಲ್ನಲ್ಲಿ ನೀಲ್ ಆಚಾರ್ಯ ಅವರ ಸಾವಿನ ಬಗ್ಗೆ ಅಲ್ಲಿನ ಬೋಧಕವರ್ಗ ಮತ್ತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದಾರೆ.