ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಭಾರತ ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ 106 ರನ್ ಅಂತರದ ಗೆಲುವು ಕಂಡಿದೆ.
ಹೈದರಾಬಾದ್ ಟೆಸ್ಟ್ ಸೋಲಿನ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದ ಭಾರತವು ಗೆಲುವಿನ ಬಳಿಕ ಉತ್ತಮ ಜಿಗಿತ ಕಂಡಿದೆ. ವಿಶಾಖಪಟ್ಟಣಂನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ.
ಹೈದರಾಬಾದ್ ಸೋಲಿನ ಬಳಿಕ ಭಾರತ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿದಿತ್ತು. ಅದರಲ್ಲಿಯೂ ಬಾಂಗ್ಲಾದೇಶ ತಂಡದಿಂದಲೂ ಭಾರತ ಕೆಳಕ್ಕೆ ಇಳಿದಿತ್ತು.
ಈ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ಭಾರತ ಮೂರು ಗೆಲುವು, ಎರಡು ಸೋಲು ಮತ್ತು ಒಂದು ಡ್ರಾ ಸಾಧಿಸಿದೆ. ಭಾರತ ತಂಡವು 52.77 ಶೇಕಡಾವಾರು ಅಂಕ ಗಳೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರು ಗೆಲುವು ಸಾಧಿಸಿರುವ ಆಸ್ಟ್ರೇಲಿಯಾ 55 ಶೇಕಡಾವಾರು ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ತಲಾ 50 ಶೇಕಡಾವಾರು ಅಂಕಗಳನ್ನು ಹೊಂದಿರುವ ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ನಂತರದ ಸ್ಥಾನದಲ್ಲಿದೆ.