ಬೆಂಗಳೂರು: ಸತತ ಎಂಟು ಅವಧಿಗೆ ಒಂದೇ ಕ್ಷೇತ್ರದಿಂದ ಆಯ್ಕೆಯಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ವಿಧಾನ ಪರಿಷತ್ ನಲ್ಲಿ ಸಚಿವರು, ಸದಸ್ಯರು ಅಭಿನಂದಿಸಿದ್ದಾರೆ.
ವಿಧಾನ ಪರಿಷತ್’ನಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್, ಎಂಟು ಅವಧಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿರುವ ಸಭಾಪತಿ ಹೊರಟ್ಟಿ ಅವರ ಬಗ್ಗೆ ವಿಷಯ ಪ್ರಸ್ತಾಪಿಸಿದ್ದು, ಹೊರಟ್ಟಿ ಸೇರಿದಂತೆ ಕೇವಲ ಮೂವರು ರಾಜಕಾರಣಿಗಳ ಹೆಸರು ಮಾತ್ರ ಈ ಸಾಲಿನ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸೇರ್ಪಡೆ ಯಾಗಿದೆ. ಇದು ಅಪರೂಪದ ಮತ್ತು ಅಸಾಧಾರಣವಾದ ಸಾಧನೆಯಾಗಿದ್ದು, ಪಕ್ಷಾತೀತವಾಗಿ ಎಲ್ಲರ ಪ್ರೀತಿ ಗಳಿಸಿದ ಕಾರಣ ಹೊರಟ್ಟಿಯವರಿಗೆ ವಿಶೇಷ ಸ್ಥಾನ ದೊರೆತಿದೆ ಎಂದು ಹೇಳಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಕಪ್ಪು ಚುಕ್ಕೆ ಇಲ್ಲದೆ ರಾಜ್ಯದ ಜನರ ಸೇವೆ ಮಾಡಿದ ಹೊರಟಿಯವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಅಭಿನಂದಿಸಿದ್ದಾರೆ.
ಎಲ್ಲಾ ಪಕ್ಷಗಳ ಸದಸ್ಯರು ನನ್ನ ಸೇವೆ ಗುರುತಿಸಿ ಒಳ್ಳೆಯ ಮಾತನಾಡಿರುವುದು ಜೀವನದ ಅತ್ಯಂತ ಸಂತೋಷದ ದಿನ ಎಂದು ಹೇಳಿದ ಬಸವ ರಾಜ ಹೊರಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.