ಲಖನೌ: ಬಿಎಸ್ಪಿ ಯಾವ ಪಕ್ಷದ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಮಾಯಾವತಿ ಹೇಳಿಕೆ ನೀಡಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಲೋಕಸಭೆ ಚುನಾವಣೆಗೂ ಮುನ್ನ ಮೈತ್ರಿ ಮಾಡಿಕೊಳ್ಳುವ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಯು ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‌ಪಿಯನ್ನು ಇಂಡಿಯಾ ಒಕ್ಕೂಟವನ್ನು ಸೇರಿಸಿಕೊಳ್ಳಲು ಹಲವು ನಾಯಕರು ಪ್ರಯತ್ನ ನಡೆಸುತ್ತಿದ್ದರು. ಬಿಎಸ್ಪಿ ಯಾವುದೇ ಪಕ್ಷದೊಂದಿಗೆ ಯಾವುದೇ ಒಕ್ಕೂಟವನ್ನು ರಚಿಸುವುದಿಲ್ಲ ಮತ್ತು ಇದನ್ನು ಹಲವು ಬಾರಿ ಹೇಳಲಾಗಿದೆ ಎಂದು ಮಾಯಾವತಿ ಹೇಳಿದರು.
ಸಮಾಜದ ಎಲ್ಲಾ ವರ್ಗಗಳ, ವಿಶೇಷವಾಗಿ ಬಡವರು, ತುಳಿತಕ್ಕೊಳಗಾದ ಮತ್ತು ನಿರ್ಲಕ್ಷಿತರ ಯೋಗಕ್ಷೇಮ ಮತ್ತು ಕಲ್ಯಾಣವನ್ನು ಪರಿಗಣಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೇವಲ ಸ್ವಂತ ಬಲವನ್ನು ಅವಲಂಬಿಸಿ ಸ್ವತಂತ್ರವಾಗಿ ಸ್ಪರ್ಧಿಸುವ ಬಿಎಸ್ಪಿಯ ನಿರ್ಧಾರವು ಅಚಲ ವಾಗಿದೆ ಎಂದು ಹೇಳಿದ್ದಾರೆ.
ಬಿಎಸ್ಪಿಗೆ ಇಂಡಿಯಾ ಒಕ್ಕೂಟದ ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್‌ನ ಉತ್ತರ ಅವಿನಾಶ್ ಪಾಂಡೆ ತಿಳಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಬೇಕೇ ಎಂದು ಮಾಯಾವತಿ ನಿರ್ಧರಿಸಬೇಕಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದ ವಿರೋಧ ಪಕ್ಷಗಳೆಲ್ಲವೂ ಸೇರಿ ಇಂಡಿಯಾ ಎಂಬ ಮೈತ್ರಿಕೂಟವನ್ನು ಆರಂಭಿಸಿತ್ತು. ಆದರೆ ಕಾಲ ಕ್ರಮೇಣ ಚುನಾವಣೆಗೂ ಮುನ್ನವೇ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದ ಕೆಲವು ಪಕ್ಷಗಳು ಬಿಜೆಪಿ ಕಡೆಗೆ ನಡೆದರೆ ಇನ್ನೂ ಕೆಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಜತೆಗೆ ಸೇರಿ ಸರ್ಕಾರ ರಚಿಸಿದ್ದರೆ, ಪಂಜಾಬ್ನಲ್ಲಿ ಸಿಎಂ ಭಗವಂತ್ ಮಾನ್ ಸ್ವತಂತ್ರವಾಗಿ ಸ್ಪರ್ಧಿಸು ವುದಾಗಿ ತಿಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ಪಕ್ಷವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.