ಹೇಗ್: ಗಲಭೆ, ಹಿಂಸಾಚಾರಕ್ಕೆ ಸಿಲುಕಿರುವ ನೆದರ್ಲ್ಯಾಂಡ್ಸ್ ಅಕ್ಷರಶಃ ನಲುಗಿದೆ. ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.
ನೆದರ್ಲ್ಯಾಂಡ್ಸ್‌ನಲ್ಲಿ ಗಲಭೆಕೋರರು ಘರ್ಷಣೆಗಿಳಿದಿದ್ದು, ಉದ್ರಿಕ್ತರ ಗುಂಪು ಕಲ್ಲು, ಇಟ್ಟಿಗೆಗಳ ತೂರಾಟದ ಜೊತೆಗೆ ಸಿಕ್ಕ, ಸಿಕ್ಕಲ್ಲಿ ಬೆಂಕಿ ಹಚ್ಚಿ ಹಿಂಸಾಚಾರದ ಉತ್ತುಂಗಕ್ಕೆ ತಲುಪಿದ್ದಾರೆ.
ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಕಾರು, ಬಸ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದ್ದಾರೆ.
ಕಳೆದ ಶನಿವಾರ ರಾತ್ರಿ ಹೇಗ್‌ನಲ್ಲಿ ಆಫ್ರಿಕನ್ ದೇಶದ ಸರ್ಕಾರವನ್ನು ವಿರೋಧಿಸಿದ ಒಂದು ಗುಂಪು ಒಪೇರಾ ಹೌಸ್‌ನಲ್ಲಿ ಸಭೆ ನಡೆಸುತ್ತಿತ್ತು. ಆಗ ಗುಂಪು ಸೇರಿದ ಎರಿಟ್ರಿಯನ್ ಮೂಲದ ನಿರಾಶ್ರಿತರು ಪೊಲೀಸರ ಮೇಲೆ ದಾಳಿ ನಡೆಸಿದೆ. ಎರಿಟ್ರಿಯಾದಿಂದ ಪಲಾಯನ ಮಾಡಿದ ನಂತರ ಹತ್ತು ಸಾವಿರ ಜನರು ಯುರೋಪ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ ಆಶ್ರಯ ಪಡೆದಿರುವ ಈ ನಿರಾಶ್ರಿತರು ಈ ಗಲಭೆಗೆ ಕಾರಣ ಎನ್ನಲಾಗುತ್ತಿದೆ.