ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು. ವೈಚಾರಿ ಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ಜ್ಞಾನದ ವಿಕಾಸ ವಾಗಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ – ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕಾರ್ಯಕ್ರಮಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಚಾಲನೆ ನೀಡಿ ಮಾತನಾಡಿ ದರು.
ಸಂವಿಧಾನ ಪೀಠಿಕೆ ಹೇಳಿದ ಮಕ್ಕಳು: ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳು ಕಲಿತ ಸಿದ್ದರಾಮನಹುಂಡಿ ಹಾಗೂ ಕುಪ್ಪೆಗಾಲ ಸರ್ಕಾರಿ ಶಾಲೆಯ ಮಕ್ಕ ಳೊಡನೆ ಮುಖ್ಯ ಮಂತ್ರಿಗಳು ಸಂವಾದ ನಡೆಸಿದರು.
ಸಂವಿಧಾನವನ್ನು ಅರಿತುಕೊಳ್ಳಬೇಕು ಎಂದ ಮುಖ್ಯ ಮಂತ್ರಿಗಳು, ಸಂವಿಧಾನ ಏನು ಹೇಳುತ್ತದೆ ಹೇಳಿ ನೋಡೋಣ ಮಕ್ಕಳನ್ನು ಕೇಳಿದಾಗ , ಮಕ್ಕಳು ಸಂವಿಧಾನದ ಪೂರ್ಣ ಪೀಠಿಕೆಯನ್ನು ಹೇಳಿದರು. ‘ಕೇವಲ ಕಂಠಪಾಠ ಮಾಡಿದರೆ ಸಾಲದು, ಅದರ ತಿರುಳನ್ನು ಅರಿತು ಅದರಂತೆ ನಡೆಯಬೇಕು ಎಂದರು.
. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಸಂವಿಧಾನದ ತಿರುಳು . ಸಮಾನತೆ ಸಮಸಮಾಜ ನಿರ್ಮಾಣ ವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರು ಇದನ್ನೇ ಹೇಳಿಕೊಂಡು ಬಂದಿದ್ದಾರೂ ಇದು ಪೂರ್ಣವಾಗಿ ಹೋಗಿಲ್ಲ. ಇದೆಲ್ಲ ಓದಿ ಅರ್ಥ ಮಾಡಿಕೊಂಡು ಮಕ್ಕಳು ಮನುಷ್ಯತ್ವ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಮಕ್ಕಳಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಕೆಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶಾಲೆಯ ಅಭಿವೃದ್ಧಿಗೆ ಸರ್ಕಾರ ಉಚಿತ ಶಿಕ್ಷಣ ನೀಡುತ್ತಿದೆ. ಸಂವಿ ಧಾನ ಜಾರಿಗೆ ಬಂದ ನಂತರ ಉಚಿತ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿ ಮಾಡಿದೆ. ಹಾಗಾಗಿ ಎಲ್ಲರಿಗೂ ಶಿಕ್ಷಣ ಕಡ್ಡಾಯವಾಗಿದೆ ಎಂದು ಮುಖ್ಯ ಮಂತ್ರಿಗಳು ಮಕ್ಕಳಿಗೆ ತಿಳಿಹೇಳಿದರು.
ಶಾಲೆಗಳಲ್ಲಿ ಮೊಟ್ಟೆ, ಹಾಲು ಕೊಡ್ತಾ ಇದ್ದಾರೆಯೇ, ವಾರದಲ್ಲಿ ಎಷ್ಟು ದಿನ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ” ಕೊಡುತ್ತಿದ್ದಾರೆ..ವಾರದಲ್ಲಿ ಮೂರು ದಿನ ನೀಡಲಾಗುತ್ತಿದೆ” ಎಂದು ಮಕ್ಕಳು ಉತ್ತರಿಸಿದರು.
ನಿಮಗಿರುವ ಸೌಲಭ್ಯ ನಮಗಿರಲಿಲ್ಲ: “ನಾನು ಓದುವಾಗ ಸಂವಿಧಾನ ಜಾರಿಗೆ ಬಂದಿತ್ತು. ನಾನು ಹುಟ್ಟಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ. ನಂಜೇಗೌಡ ಎಂಬುವರು ನನಗೆ ಅಕ್ಷರಾಭ್ಯಾಸ ಮಾಡಿಸಿದರು. ಕನ್ನಡ ಓದು ಬರೆಯುವುದು, ಲೆಕ್ಕ ಮಾಡುವುದನ್ನು ಹೇಳಿಕೊಟ್ಟಿದ್ದರು. ಅವರು ಶಾಲೆ ಬಿಟ್ಟ ನಂತರ ಎಮ್ಮೆ ಮೇಯಿಸುತ್ತಿದ್ದ ನನ್ನನ್ನು ರಾಜಪ್ಪ ಎಂಬ ಮೇಷ್ಟ್ರು ಮನೆಗೆ ಬಂದು ನೇರವಾಗಿ 5 ನೇ ತರಗತಿಗೆ ಸೇರಿಸಿದ್ದರು ಎಂದು ಮುಖ್ಯ ಮಂತ್ರಿಗಳು ಸ್ಮರಿಸಿ ಕೊಂಡರು. 8 ನೇ ತರಗತಿ ಓದಲು ಕುಪ್ಪೆಗಾಲಕ್ಕೆ ಹೋಗುತ್ತಿದ್ದೆ. ಪ್ರೌಢ ಶಾಲೆಗೆ ವಿದ್ಯಾವರ್ಧಕ ಶಾಲೆಗೆ ಸೇರಿದ್ದೆ ಎಂದರು. ನಿಮಗಿರುವ ಸೌಲಭ್ಯ ನಮಗಿರ ಲಿಲ್ಲ” ಎಂದರು.
ಶಾಲೆಯ ದಾಖಲೆಗಳಲ್ಲಿ ನನ್ನ ಹುಟ್ಟಿದ ದಿನಾಂಕ 3-8- 1947 ಎಂದು ನಮೂದಾಗಿದೆ ಎಂದು ಅವರು ನೆನಪಿಸಿಕೊಂಡರು.
ಈಗ ಸರ್ಕಾರ ಹಾಲು, ಮೊಟ್ಟೆ, ಚಿಕ್ಕಿ, ಬಿಸಿಯೂಟ , ಸಮವಸ್ತ್ರ, ಸಿಗುತ್ತದೆ. ನಮ್ಮ ಕಾಲದಲ್ಲಿ ಶಿಕ್ಷಕರಿಂದ ಏಟನ್ನೂ ತಿನ್ನುತ್ತಿದ್ದೆವು ಎಂದರು. ಅಂದಿನ ಹೆಣ್ಣು ಮಕ್ಕಳು ಹೆಚ್ಚಾಗಿ ಓದುತ್ತಿರಲಿಲ್ಲ ಎಂದು ಮುಖ್ಯ ಮಂತ್ರಿಗಳು ಅಂದಿನ ಪರಿಸ್ಥಿತಿಯನ್ನು ನೆನೆಸಿಕೊಂಡರು. ಈಶ್ವರಾಚಾರ್ ಹೇಳಿಕೊಟ್ಟಿದ್ದ ಕನ್ನಡ ವ್ಯಾಕರಣವನ್ನು ನಾನು ಈಗಲೂ ಮರೆತಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಓದಿದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ , ಕುಪ್ಪೇಗಾಲ ಮತ್ತು ಕೆ.ಪಿ.ಎಸ್. ಸಿದ್ದರಾಮನ ಹುಂಡಿ ಇಲ್ಲಿಗೆ 10 ಲಕ್ಷ ರೂ. ಗಳ ದೇಣಿಗೆ ನೀಡಿದರು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, 6 ಕೋಟಿ ರೂ.ಗಳನ್ನು ಹಳೆಯ ಶಾಲೆಯ ವಿದ್ಯಾರ್ಥಿಗಳು ನೀಡಿದ್ದಾರೆ. ಮಾಲೂರಿನಲ್ಲಿಯೂ ಕೂಡ ಆರು ಕೋಟಿ ರೂ.ಗಳು ಹಳೆಯ ವಿದ್ಯಾರ್ಥಿಗಳು ಸಂಗ್ರಹಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳವರು ಮಕ್ಕಳಿಗೆ ಪಾಠವನ್ನೂ ಮಾಡಿದ್ದಾರೆ. 48000 ಸರ್ಕಾರಿ ಶಾಲೆಗಳಲ್ಲಿ 14 000 ವಾಟ್ಸಾಪ್ ಗುಂಪುಗಳಾಗಿವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕುರಿತು ದೊಡ್ಡ ಗುರಿಯನ್ನು ಹೊಂದಿದ್ದೇವೆ. 44 ಸಾವಿರ ಕೋಟಿ ರೂ.ಗಳನ್ನು ಸರ್ಕಾರಿ ಶಾಲೆ ಗಳ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ. ಸಿ.ಎಸ್.ಆರ್. ನಿಂದಲೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳ ಲಾಗಿದೆ ಎಂದರು.
ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕೈಗಾರಿಕಾ ಸಚಿವ ಎಂ. ಬಿ.ಪಾಟೀಲ್ , ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಸುಧಾಕರ್, ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ , ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.