ಬೆಂಗಳೂರು: ಬೆಂಗಳೂರಿನ ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಮತ್ತು ಕೇರಳದ ಕೊಚ್ಚಿಯ ಪ್ಯಾಲೆಟ್ ಪೀಪಲ್, ಕೇರಳದ ಅತ್ಯಂತ ಪ್ರಖ್ಯಾತ ಕಲಾವಿದರಲ್ಲಿ ಒಬ್ಬರಾಗಿರುವ ಸಿ.ಎನ್.ಕರುಣಾಕರನ್ ಅವರ ಜೀವನ ಮತ್ತು ಕಲಾ ಪರಂಪರೆ ಆಚರಿಸುವ “ಚಿತ್ರಕೂಟಂ: ಎ ಟ್ರಿಬ್ಯೂಟ್ ಟು ಸಿ.ಎನ್.ಕರುಣಾಕರನ್’ ಎಂಬ ಸಮಗ್ರ ಚಿತ್ರಕಲಾ ಪ್ರದರ್ಶನ ಆಯೋಜಿಸಿದೆ.
ಫೆಬ್ರವರಿ 26ರಿಂದ ಪ್ರದರ್ಶನ ಆರಂಭಗೊಂಡಿದ್ದು. ಮಾ.31 ರವರೆಗೆ ನಡೆಯಲಿದೆ. ಈ ಪ್ರದರ್ಶನದಲ್ಲಿ ಸ್ವತಂತ್ರ ಭಾರತದ ಆಧುನಿಕ ಪ್ರಕಾರದ ಕಲಾ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಲಾವಿದನ ಸಮೃದ್ಧ ಕಲಾಸೇವೆಯ ದರ್ಶನ ವಿಕ್ಷಕರಿಗೆ ಸಿಗಲಿದೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ 7ನೇ ಅಡ್ಡರಸ್ತೆ ಯಲ್ಲಿರುವ ಮೆಜ್ಜಾನೈನ್ ಲೆವೆಲ್, 38 ಮೈನಿ ಸದನ್ ನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ.
1940 ರಲ್ಲಿ ಕೇರಳದ ಬ್ರಹ್ಮಕುಲಂ ಎಂಬ ಹಳ್ಳಿಯಲ್ಲಿ ಜನಿಸಿದ ಸಿ.ಎನ್.ಕರುಣಾಕರನ್ ಅವರು ಬಾಲ್ಯದಿಂದಲೇ ಕಲಾತ್ಮಕ ಅನ್ವೇಷಣೆಯ ಪ್ರಯಾಣ ಪ್ರಾರಂಭಿಸಿದ್ದರು, ಅವರ ಅಮೂಲ್ಯ ಪ್ರತಿಭೆ ಅವರನ್ನು ಮದ್ರಾಸ್ನ (ಈಗಿನ ಚೆನ್ನೈ) ಸರ್ಕಾರಿ ಕಲಾ ಮತ್ತು ಕರಕುಶಲ ಶಾಲೆಗೆ ಪ್ರವೇಶ ಪಡೆಯು ವಂತೆ ಮಾಡಿತು.
ಡಿ.ಪಿ.ರಾಯ್ ಚೌಧರಿ ಮತ್ತು ಕೆ.ಸಿ.ಎಸ್.ಪಣಿಕರ್ ಅವರ ಮಾರ್ಗದರ್ಶನದಲ್ಲಿ ಪಳಗಿದ ಕರುಣಾ ಕರನ್ ವಿನ್ಯಾಸ ಮತ್ತು ಚಿತ್ರಕಲೆಯ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಅಲ್ಲದೆ ಆಧುನಿಕತೆ ಮತ್ತು ಸೃಜನಶೀಲತೆಯ ಬೆಳಕಾಗಿ ಹೊರಹೊಮ್ಮಿದರು. ಟೈಫಾಯ್ಡ್ನಿಂದ ಒಂದು ಕಾಲಿನ ಬಲ ಕಳೆದುಕೊಳ್ಳುವುದು ಸೇರಿದಂತೆ ಹಲವಾರು ಸವಾಲುಗಳು ಆರಂಭದಲ್ಲಿ ಅವರಿಗೆ ಎದುರಾಯಿತು. ಆದರೆ, ಅವ್ಯಾವುವೂ ಅವರ ಉತ್ಸಾಹಕ್ಕೆ ಭಂಗ ತರಲಿಲ್ಲ. ಬದಲಾಗಿ ಈ ಸವಾಲುಗಳೆಲ್ಲವೂ ಕಲೆಯನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ಮುಂದುವರಿಸುವ ಅವರ ದೃಢ ನಿಶ್ಚಯವಾಗಿ ಬದಲಾಯಿತು.
ಕರುಣಾಕರನ್ ಅವರ ವೃತ್ತಿಜೀವನವು ಅವರ ಬಹುಮುಖ ಪ್ರತಿಭೆ ಮತ್ತು ನಾವೀನ್ಯತೆಗೆ ಸಾಕ್ಷಿಯಾಗಿದೆ. ಆರಂಭದಲ್ಲಿ ಮಾರಾಟದ ಉದ್ದಶ ದಿಂದ ಕಡಲ ಚಿಪ್ಪುಗಳನ್ನು ಚಿತ್ರಿಸಿದ ಅವರು ಬಳಿಕ ಸಿನಿ ಕ್ಷೇತ್ರದಲ್ಲಿ ಸಾಂದರ್ಭಿಕವಾಗಿ ಕೆಲಸ ಮಾಡಿದರು. ಅಂತೆಯೇ ಅವರು 1970ರಲ್ಲಿ ಕೇರಳಕ್ಕೆ ಮರಳಿದರು, ಅಲ್ಲಿ ಅವರು ತಮ್ಮ ಕಲೆಯ ಗಡಿಗಳನ್ನು ಪ್ರಾದೇಶಿಕ ಚೌಕಟ್ಟಿನೊಳಗೆ ಅಳವಡಿಸಿಕೊಳ್ಳಲು ಆರಂಭಿಸಿದರು. 1973ರಲ್ಲಿ, ಅವರು ಕೇರಳದ ಮೊದಲ ಖಾಸಗಿ ಕಲಾ ಗ್ಯಾಲರಿಯಾದ ಚಿತ್ರಕೂಟಂ ಅನ್ನು ಸ್ಥಾಪಿಸಿದರು, ಇದು ಅವರ ವೃತ್ತಿಜೀವನದಲ್ಲಿ ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
“ಚಿತ್ರಕೂಟಂ: ಎ ಟ್ರಿಬ್ಯೂಟ್ ಟು ಸಿ.ಎನ್. ಕರುಣಾಕರನ್ ” ಪ್ರದರ್ಶನಕ್ಕೆ ಅವರೇ ಸೃಷ್ಟಿಸಿದ್ದ ಪ್ರಭಾವಶಾಲಿ ಗ್ಯಾಲರಿಯ ಹೆಸರನ್ನು ಇಡಲಾಗಿದೆ. ಅಲ್ಲದೆ, ಕರುಣಾಕರನ್ ಅವರ ಅತ್ಯಂತ ಸ್ಮರಣೀಯ ಕೃತಿಗಳ ಆಯ್ಕೆಯ ಮೂಲಕ ಅವರ ಪರಂಪರೆಯನ್ನು ಗೌರವಿಸುವ ಪ್ರಯತ್ನ ಮಾಡಲಾಗಿದೆ. ಕಲಾಭಿಮಾನಿಗಳು ಅವರ ಅಮೂರ್ತ ಲ್ಯಾಂಡ್ಸ್ಕೇಪ್ಗಳು, ಸಾಂಕೇತಿಕ ಚಿತ್ರಕಲೆಗಳು ಮತ್ತು ಕೇರಳದ ಭಿತ್ತಿಚಿತ್ರ ಮತ್ತು ಮಿನಿಯೇಚರ್ ಸಂಪ್ರದಾಯ ಗಳನ್ನು ಅನುಭವಿಸುವ ಅವಕಾಶ ಹೊಂದಿದ್ದಾರೆ. ಇದು ಅವರ ವಿಶಿಷ್ಟ ಶೈಲಿ ಮತ್ತು ಭಾರತೀಯ ಕಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತದೆ.
ಕರುಣಾಕರನ್ ಅವರಿಗೆ ಹಲವಾರು ಬಿರುದುಗಳು ಲಭಿಸಿವೆ. ಮದ್ರಾಸ್ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಹಲವು ಬಾರಿ ಕೇರಳ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಪಿ.ಟಿ.ಭಾಸ್ಕರ ಪಣಿಕರ್ ಪ್ರಶಸ್ತಿ, ಮಲಯತ್ತೂರು ರಾಮಕೃಷ್ಣನ್ ಪ್ರಶಸ್ತಿ ಮತ್ತು ರವಿವರ್ಮ ಪುರಸ್ಕಾರ ಪ್ರಶಸ್ತಿ ಅವರ ಕಲಾಸಾಮರ್ಥ್ಯವನ್ನು ಗೌರವಿಸಿದೆ . ಅವರ ಪ್ರದರ್ಶನಗಳು ಜಾಗತಿಕವಾಗಿ ಪ್ರಚಲಿತವಾಗಿದೆ, ಬ್ರೆಜಿಲ್, ಯುಎಸ್ಎ ಮತ್ತು ಕುವೈತ್ನಲ್ಲಿ ಏಕವ್ಯಕ್ತಿ ಪ್ರದರ್ಶನಗಳನ್ನು ಕಂಡಿವೆ. ಈ ಮೂಲಕ ಅವರ ಅಂತಾರಾಷ್ಟ್ರೀಯ ಆಕರ್ಷಣೆ ಮತ್ತು ಪ್ರಭಾವವನ್ನು ಒತ್ತಿಹೇಳಲಾಗಿದೆ.
ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್, ಕಲಾ ಪ್ರೇಮಿಗಳಿಗೆ, ಪಂಡಿತರಿಗೆ ಮತ್ತು ಸಾರ್ವಜನಿಕರಿಗೆ ಸಿ.ಎನ್.ಕರುಣಾಕರನ್ ಅವರ ಪರಂಪರೆ ಯನ್ನು ವೀಕ್ಷಿಸಿ ಸಂಭ್ರಮಿಸಲು ಆಹ್ವಾನ ನೀಡುತ್ತಿದೆ. “ಚಿತ್ರಕೂಟಂ: ಎ ಟ್ರಿಬ್ಯೂಟ್ ಟು ಸಿ.ಎನ್.ಕರುಣಾಕರನ್” ಕೇವಲ ಪ್ರದರ್ಶನವಾಗಿಲ್ಲ. ಇದು ಆಧುನಿಕ ಭಾರತೀಯ ಕಲೆಯ ವಿಕಾಸಕ್ಕೆ ಸಾಕ್ಷಿಯಾಗುವ ಜತೆಗ, ಕಲಾ ಕ್ಷೇತರಕ್ಕೆ ಕೊಡುಗೆ ನೀಡಿದ ಕಲಾವಿದನ ಜೀವನ ಪಯಣದ ಪ್ರಸಂಗವಾಗಿದೆ.
ಸಂದೀಪ್ ಮತ್ತು ಗೀತಾಂಜಲಿ ಮೈನಿ ಫೌಂಡೇಶನ್ ಬಗ್ಗೆ: ಸಂದೀಪ್ & ಗೀತಾಂಜಲಿ ಮೈನಿ ಫೌಂಡೇಶನ್ ಭಾರತದ ಶ್ರೀಮಂತ ಕಲಾ ಪರಂಪರೆ ಯನ್ನು ಸಂರಕ್ಷಿಸುವ ಮತ್ತು ಸಂಭ್ರಮಿಸುವ ಜತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಕಾರ್ಯವನ್ನು ಮಾಡುತ್ತಿದೆ. ಪ್ರದರ್ಶನಗಳು, ಕಾರ್ಯಾಗಾರಗಳು ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ, ಪ್ರತಿಷ್ಠಾನವು ಕಲೆಗಳ ಬಗ್ಗೆ ಆಳವಾದ ತಿಳುವಳಿಕೆ ಮತ್ತು ಪ್ರಶಂಸೆಯನ್ನು ನೀಡುವ ಗುರಿಯನ್ನು ಹೊಂದಿದೆ.
ಪ್ಯಾಲೆಟ್ ಪೀಪಲ್ ಇಂಟರ್ನ್ಯಾಷನಲ್ ಆರ್ಟ್ ಫೌಂಡೇಶನ್: 1991 ರಲ್ಲಿ ಸ್ಥಾಪನೆಯಾದ ಪ್ಯಾಲೆಟ್ ಪೀಪಲ್ ಇಂಟರ್ನ್ಯಾಷನಲ್ ಆರ್ಟ್ ಫೌಂಡೇಶನ್ ಕೇರಳದ ಕಲಾ ಸಮುದಾಯಕ್ಕೆ ಬೆಂಬಲ ನೀಡುವ ಸೃಜನಶೀಲತೆ ಬೆಂಬಲವಾಗಿ ನಿಂತಿದೆ. ನೋಂದಣಿಯಾಗಿರುವ ದತ್ತಿ ಸಂಸ್ಥೆಯಾಗಿ, ಪ್ರದರ್ಶನಗಳು, ಶಿಬಿರಗಳು, ಸೆಮಿನಾರ್ಗಳು, ಭಾಷಣಗಳು, ಧನ ಸಹಾಯ ಸೇರಿದಂತೆ ಹಲವಾರು ವಿಧಾನದ ಮೂಲಕ ಕಲಾವಿದರ ಬೆಳವಣಿಗೆ ಮತ್ತು ಅವರ ಪ್ರತಿಭೆ ಮೇಲೆ ಬೆಳಕು ಚೆಲ್ಲುವುದು ಫೌಂಡೇಶನ್ನ ಧ್ಯೇಯವಾಗಿದೆ.