ಬೆಂಗಳೂರು: ಸಂಸದರಾದ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಅವರ ವೈಯಕ್ತಿಕ ವಿಚಾರವೇ ಹೊರತು ಪಕ್ಷದ ವಿಚಾರ ಅಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ಕೂಡ ಬಾಬಾ ಸಾಹೇಬ ಅಂಬೇಡ್ಕರರ ತತ್ವ, ಸಿದ್ಧಾಂತಗಳ ಜೊತೆ ಇದೆ. ನಮ್ಮ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆಯ ಮಾತೇ ಇಲ್ಲ ಎಂದು ಪ್ರಧಾನಿಯವರೂ ಹೇಳಿದ್ದಾರೆ; ಅಲ್ಲದೆ ಸಂವಿಧಾನಕ್ಕೆ ನಮಿಸಿ ಪ್ರಧಾನಿ ಅವರು ಅಧಿಕಾರ ಸ್ವೀಕರಿಸಿದವರು ಎಂದು ನೆನಪಿಸಿದರು.
ಸಂಸದರಾದ ಅನಂತಕುಮಾರ್ ಹೆಗಡೆ ಅವರು ಬಹಳ ಹಿಂದೆ ‘ನಾವು ಬಂದಿರುವುದೇ ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕೆ’ ಎಂದು ಹೇಳಿಕೆ ಕೊಟ್ಟಿದ್ದರು. ಆಗ ಅವರು ಸಚಿವರಾಗಿದ್ದರು. ಮಾನ್ಯ ಪ್ರಧಾನಮಂತ್ರಿ ಮೋದಿಜೀ ಅವರು ಅವರನ್ನು ಸದನಕ್ಕೆ ಕರೆಸಿ ಕ್ಷಮೆ ಕೇಳಿಸುವ ಕೆಲಸ ಮಾಡಿದ್ದರು ಎಂದು ವಿವರಿಸಿದರು.
ಅದಾದ ಬಳಿಕ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲಾಗಿತ್ತು. ಇದೆಲ್ಲವೂ ಗೊತ್ತಿದ್ದರೂ ಕೂಡ ಎರಡ್ಮೂರು ದಿನಗಳ ಹಿಂದೆ ಅವರು, ಸಂವಿಧಾನದಲ್ಲಿ ಬದಲಾವಣೆ ಮಾಡಲು 400 ಸ್ಥಾನಗಳನ್ನು ಗೆಲ್ಲುವ ಗುರಿ ಇದೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು. ಪಕ್ಷಕ್ಕೆ ಮುಜುಗರ ತರುವ ಮತ್ತು ವಿಪಕ್ಷಕ್ಕೆ ಆಹಾರ ಕೊಡುವಂಥ ಹೇಳಿಕೆ ನೀಡುವ ಅನಂತಕುಮಾರ್ ಸ್ಥಿಮಿತದಲ್ಲಿ ಇದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಹೇಳಿಕೆ ಖಂಡನಾರ್ಹ ಎಂದರು. ಇಂಥ ಹೇಳಿಕೆಯಿಂದ ದೂರ ಉಳಿಯಲು ಮನವಿ ಮಾಡಿದರು.
ದೇಶದ ಪ್ರಧಾನಿ ಮೋದಿಯವರನ್ನು ಕೀಳುಮಟ್ಟದ ಭಾಷೆಯಲ್ಲಿ ಟೀಕಿಸುವುದು ಕಾಂಗ್ರೆಸ್ಸಿಗರ ಜಾಡ್ಯ; ಇದೊಂದು ಅಂಟು ರೋಗ. ಮುಖ್ಯಮಂತ್ರಿ ಆದಿಯಾಗಿ ಕೆಲವರಿಗೆ ಇರುವ ರೋಗವು ತಳಮಟ್ಟಕ್ಕೂ ಹರಡಿದೆ ಎಂದು ಅವರು ವಿಶ್ಲೇಷಿಸಿದರು. ಇದಕ್ಕೆ ರಾಜ್ಯದ ಮುಖ್ಯಮಂತ್ರಿಯವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.