ಅಹಮದಾಬಾದ್: ಹಣ ಇಲ್ಲದೆ ರಾಜಕೀಯ ಪಕ್ಷವನ್ನು ಮುನ್ನಡೆಸಲು ಅಸಾಧ್ಯ. ಒಳ್ಳೆಯ ಉದ್ದೇಶದಿಂದ 2017ರಲ್ಲಿ ಕೇಂದ್ರ ಸರ್ಕಾರ ಚುನಾವಣಾ ಬಾಂಡ್ ಅನ್ನು ಜಾರಿಗೆ ತಂದಿತ್ತು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಒಂದು ವೇಳೆ ಚುನಾವಣಾ ಬಾಂಡ್ ಬಗ್ಗೆ ಸುಪ್ರೀಂ ಕೋರ್ಟ್ ಹೆಚ್ಚಿನ ನಿರ್ದೇಶನ ನೀಡಿದರೆ ರಾಜಕೀಯ ಪಕ್ಷಗಳು ಒಟ್ಟು ಕುಳಿತು ಚರ್ಚೆ ಮಾಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಗಾಂಧಿನಗರದ ಗಿಫ್ಟ್ ಸಿಟಿಯಲ್ಲಿ ಮಾಧ್ಯಮ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅರುಣ್ ಜೇಟ್ಲಿಯವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ, ಚುನಾವಣಾ ಬಾಂಡ್ ಬಗ್ಗೆ ಚರ್ಚೆ ಮಾಡುವ ವೇಳೆ ನಾನು ಅದರ ಭಾಗವಾ ಗಿದ್ದೆ. ಸಂಪನ್ಮೂಲ ಇಲ್ಲದೆ ಯಾವುದೇ ಪಕ್ಷಕ್ಕೂ ಉಳಿಗಾಲವಿಲ್ಲ. ಕೆಲವು ದೇಶಗಳಲ್ಲಿ ಸರ್ಕಾರವೇ ರಾಜಕೀಯ ಪಕ್ಷಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಆದರೆ ಭಾರತದಲ್ಲಿ ಆ ವ್ಯವಸ್ಥೆ ಇಲ್ಲ. ಹೀಗಾಗಿ ನಾವು ಈ ವಿಧಾನವನ್ನು (ಚುನಾವಣಾ ಬಾಂಡ್) ಆಯ್ಡುಕೊಂಡಿದ್ದೆವು’ ಎಂದು ಹೇಳಿದ್ದಾರೆ.
‘ರಾಜಕೀಯ ಪಕ್ಷಗಳಿಗೆ ನೇರವಾಗಿ ದೇಣಿಗೆ ಸಿಗಬೇಕು ಎನ್ನುವುದು ಚುನಾವಣಾ ಬಾಂಡ್‌ನ ಉದ್ದೇಶವಾಗಿತ್ತು. ಅಧಿಕಾರ ಬದಲಾದರೆ ಸಮಸ್ಯೆ ಆಗಬಾ ರದು ಎನ್ನುವ ಕಾರಣಕ್ಕೆ ದೇಣಿಗೆ ನೀಡಿದವರ ವಿವರ ಗೌಪ್ಯವಾಗಿಡಲಾಗಿತ್ತು’ ಎಂದಿದ್ದಾರೆ.
‘ನೀವು ವಾಸ್ತವವನ್ನು ಗಮನಿಸಬೇಕು. ಪಕ್ಷಗಳು ಹೇಗೆ ಚುನಾವಣೆಯನ್ನು ಎದುರಿಸುತ್ತವೆ? ಪಾರದರ್ಶಕತೆ ತರಲು ನಾವು ಚುನಾವಣಾ ಬಾಂಡ್ ಜಾರಿಗೆ ತಂದೆವು. ಬಾಂಡ್ ಜಾರಿ ವೇಳೆ ನಮ್ಮ ಉದ್ದೇಶ ಒಳ್ಳೆಯದಿತ್ತು. ಇದರಲ್ಲಿ ಸಮಸ್ಯೆ ಇದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟರೆ ಹಾಗೂ ಅದನ್ನು ಸರಿಪಡಿಸಿ ಎಂದು ಹೇಳಿದರೆ ಎಲ್ಲಾ ಪಕ್ಷಗಳು ಕುಳಿತು ಚರ್ಚೆ ಮಾಡಬೇಕು’ ಎಂದು ಹೇಳಿದ್ದಾರೆ.