Advertisements

ಕೋವಿಡ್ ಸಮಯದಲ್ಲಿ ಜನರ ಕಷ್ಟಕ್ಕೆ ನಿಂತಿದ್ದು ಡಿ.ಕೆ. ಸುರೇಶ್, ಆಗ ಕುಮಾರಸ್ವಾಮಿ ಕುಟುಂಬದವರು ಎಲ್ಲಿದ್ದರು: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

ರಾಮನಗರ: “ಕೋವಿಡ್ ಸಮಯದಲ್ಲಿ ಜನರು ಕಷ್ಟಕ್ಕೆ ಸಿಲುಕಿದ್ದಾಗ ಅವರ ಪರವಾಗಿ ನಿಂತಿದ್ದು ಡಿ.ಕೆ. ಸುರೇಶ್. ಇದು ಮಾನವೀಯತೆ, ಹೃದಯವಂತಿಕೆಯಲ್ಲವೇ? ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಹಾಗೂ ಅವರ ಕುಟುಂಬದವರು ಎಲ್ಲಿ ಹೋಗಿದ್ದರು?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಅವರು ಗುರುವಾರ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು;

“ನನಗೆ ಕುಮಾರಸ್ವಾಮಿ ಅವರ ವಿಚಾರ ಮಾತನಾಡಲು ಇಷ್ಟವಿಲ್ಲ. ಆದರೂ ಅವರಿಗೆ ಒಂದು ವಿಚಾರ ಕೇಳಬಯಸುತ್ತೇನೆ. ನೀವು ಈ ಜಿಲ್ಲೆಯ ಕ್ಷೇತ್ರವೊಂದರ ಶಾಸಕರು. ಕೋವಿಡ್ ಬಂದಾಗ ಈ ಭಾಗದ ಬಡವರ ರಕ್ಷಣೆಗೆ ನೀವು ಯಾರಾದರೂ ಒಬ್ಬರು ಮುಂದೆ ಬಂದರಾ? ಇಲ್ಲ.

ಆದರೆ, ಡಿ.ಕೆ ಸುರೇಶ್ ಅವರು ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥ, ಮೆಡಿಕಲ್ ಕಿಟ್ ವಿತರಿಸಿದರು. ರೈತರಿಗೆ ಮಾರುಕಟ್ಟೆ ಇಲ್ಲದಾಗ, ರೈತರು ಬೆಳೆದ ತರಕಾರಿಗಳನ್ನು ಅವರ ಜಮೀನಿನಿಂದ ಖರೀದಿ ಮಾಡಿದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತರಕಾರಿ ಖರೀದಿಸಿ ಅದನ್ನು ಜನಸಾಮಾನ್ಯರಿಗೆ ಉಚಿತವಾಗಿ ಹಂಚಿದ್ದಾರೆ. ಆ ಮೂಲಕ ರೈತರು ಹಾಗೂ ಬಡವರನ್ನು ರಕ್ಷಣೆ ಮಾಡಿದ್ದಾರೆ.

ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಇನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಇದ್ದಾಗ, ಸುರೇಶ್ ಅವರು ತಾವೇ ಖುದ್ದಾಗಿ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡ್ ಒಳಗೆ ಹೋಗಿ, ಸೋಂಕಿತರ ಸಮಸ್ಯೆ ಆಲಿಸಿದರು. ಅವರಿಗೆ ಧೈರ್ಯ ತುಂಬಿದರು. ಇದು ಮಾನವೀಯತೆ ಅಲ್ಲವೇ? ಇದು ಹೃದಯವಂತಿಕೆಯಲ್ಲವೇ? ಕುಮಾರಣ್ಣ ಆಗ ಎಲ್ಲಿ ಹೋಗಿದ್ದರು? ಅವರ ಅಭ್ಯರ್ಥಿ ಎಲ್ಲಿ ಹೋಗಿದ್ದರು? ಅವರ ಕುಟುಂಬ ಎಲ್ಲಿ ಹೋಗಿತ್ತು?

ಕಷ್ಟಕಾಲದಲ್ಲಿ ಜನರಿಗೆ ಸಹಾಯ ಮಾಡಲು ಕುಮಾರಸ್ವಾಮಿ ಅವರಿಂದ ಆಗಲಿಲ್ಲ. ರಾಮನಗರದಲ್ಲಿರುವ ಆಸ್ಪತ್ರೆ ಕಟ್ಟಿಸಿದವರು ಯಾರು? ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಡಿ.ಕೆ. ಶಿವಕುಮಾರ್ ಕಟ್ಟಿಸಿದ್ದು. ಅಲ್ಲಮಪ್ರಭುಗಳು ಒಂದು ಮಾತು ಹೇಳುತ್ತಾರೆ. ಕೊಟ್ಟ ಕುದುರೆಯನು ಏರಲರಿಯದೇ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ. ಅದೇ ರೀತಿ ಕುಮಾರಣ್ಣ ಅಧಿಕಾರ ಇಲ್ಲದಾಗ ಏನೂ ಮಾಡಲಿಲ್ಲ, ಅಧಿಕಾರ ಹೋದಾಗ ಏನು ಮಾಡುತ್ತೀರಿ?

ನಾವು ಈ ಕ್ಷೇತ್ರದ ಅಭಿವೃದ್ಧಿಗೆ ಬದ್ಧ:

ಸುರೇಶ್ ಅವರನ್ನು ಆಯ್ಕೆ ಮಾಡಿದರೆ ಏನು ಲಾಭ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ನರೇಗಾ ಯೋಜನೆಯಲ್ಲೇ 2,000 ಕೋಟಿ ಅನುದಾನ ತಂದು ದೇಶದಲ್ಲೇ ಮಾದರಿ ತಾಲೂಕಾಗಿ ಮಾಡಿರುವುದು ಸಂಸದ ಡಿ.ಕೆ. ಸುರೇಶ್. ಈ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಿ ಈ ಭಾಗದ ಅಂತರ್ಜಲ ಮಟ್ಟ ಏರಿಸಿದ್ದರೆ ಅದು ಡಿ.ಕೆ. ಸುರೇಶ್ ಮತ್ತು ಡಿ.ಕೆ. ಶಿವಕುಮಾರ್ ಮಾತ್ರ. ಇಡೀ ರಾಷ್ಟ್ರದಲ್ಲಿ ಯಾವುದಾದರೂ ಲೋಕಸಭಾ ಕ್ಷೇತ್ರದಲ್ಲಿ ಪ್ರತಿ ಎರಡು ಮೂರು ರೈತರಿಗೆ ಒಂದೊಂದು ಟ್ರಾನ್ಸ್ಫಾರ್ಮರ್ ಗಳನ್ನು ಕೊಟ್ಟಿದ್ದೇವೆ. ಇಂತಹ ವ್ಯವಸ್ಥೆ ಈ ಕ್ಷೇತ್ರದ ಹೊರತಾಗಿ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬೇರೆ ಯಾವುದೇ ಕ್ಷೇತ್ರದಲ್ಲಿಲ್ಲ.

ಈ ಜಿಲ್ಲೆಯ ಬಡ ಜನರಿಗೆ ನಿವೇಶನ ನೀಡಬೇಕು ಎಂಬುದು ಡಿ.ಕೆ. ಸುರೇಶ್ ಅವರ ಕನಸು. ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ನಾವು ಮನವಿ ಮಾಡಿದೆವು. ಆದರೂ ಅವರು ಒಂದು ಸಭೆಗೂ ಬರಲಿಲ್ಲ. ಆಶ್ರಯ ಸಮಿತಿ ಸಭೆಗೂ ಬರಲಿಲ್ಲ. ನಾವು ಚರ್ಚೆ ಮಾಡಿ 60 ಎಕರೆ ಜಾಗ ಮೀಸಲಿಡಲು ತೀರ್ಮಾನ ಮಾಡಿದೆವು. ಕಳೆದ ಬಾರಿ ಚುನಾವಣೆಯಲ್ಲಿ ನನ್ನ ಮನವಿಗೆ ಸ್ಪಂದಿಸಿ ನೀವು ಇಕ್ಬಾಲ್ ಅಹ್ಮದ್ ಅವರನ್ನು ಆರಿಸಿ ಕಳುಹಿಸಿದ್ದೀರಿ. ಈಗ ಡಿ.ಕೆ. ಸುರೇಶ್ ಹಾಗೂ ಇಕ್ಬಾಲ್ ಅವರು ಸೇರಿ ಬಡವರಿಗೆ ನಿವೇಶನ ನೀಡಲು 100 ಎಕರೆ ಜಾಗವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ. ಚನ್ನಪಟ್ಟಣ ಹಾಗೂ ರಾಮನಗರಕ್ಕೆ ಕುಡಿಯುವ ನೀರು ಪೂರೈಸಲು 540 ಕೋಟಿ ಯೋಜನೆ ರೂಪಿಸಲಾಗಿದೆ.

ನಾವು ಮೇಕೆದಾಟು ಯೋಜನೆ ಆಗ್ರಹಿಸಿ ಇದೇ ರಸ್ತೆಯಲ್ಲಿ ಪಾದಯಾತ್ರೆ ಮಾಡಿದೆವು. ಈಗ ದೇವೇಗೌಡರು ಮೇಕೆದಾಟು ಯೋಜನೆಗೆ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ. ಈಗ ಅವರ ಕುಟುಂಬದಿಂದ ಕಾವೇರಿ ಜಲಾನಯನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಅವರ ಕುಟುಂಬದ ಸದಸ್ಯರು ಸ್ಪರ್ಧೆ ಮಾಡಿದ್ದು, ಜನ ಎಲ್ಲಿ ಅವರನ್ನು ತಿರಸ್ಕರಿಸುತ್ತಾರೋ ಎಂಬ ಭಯದಿಂದ ಈಗ ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕು ಎಂದು ಹೇಳುತ್ತಿದ್ದಾರೆ.

ದೇವೇಗೌಡರೇ, ಈ ಜನರು ದಡ್ಡರಲ್ಲ. ಈ ಜನ ನಿಮ್ಮನ್ನು, ಕುಮಾರಣ್ಣನವರನ್ನು ನೋಡಿದ್ದಾರೆ. ಇಂದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ನಾನು ನೀರಾವರಿ ಹಾಗೂ ಬೆಂಗಳೂರು ಇಲಾಖೆ ಜವಾಬ್ದಾರಿ ತೆಗೆದುಕೊಂಡಿರುವುದೇ ಈ ಯೋಜನೆ ಮಾಡಿ ಇತಿಹಾಸ ಸೃಷ್ಟಿಸಲು. ಈ ಯೋಜನೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಯೋಜನೆಯ ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿಯನ್ನು ಗುರುತಿಸಿ ಸರ್ವೇ ಮಾಡಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ.

ಯಾರು ಬೆಂಬಲ ನೀಡುತ್ತಾರೋ ಇಲ್ಲವೋ ನಾವಂತೂ ಈ ಯೋಜನೆ ಮಾಡೇ ಮಾಡುತ್ತೇವೆ. ನಾವು ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ನಾವು ಕೊಟ್ಟೆ ಕೊಡುತ್ತೇವೆ. ಅದರಲ್ಲಿ ಯಾವುದೇ ಮೋಸವಾಗುವುದಿಲ್ಲ. ಈ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತೇವೆ. ಈ ಹಿಂದೆ 450 ಟಿಎಂಸಿ ನೀರು ಸಮುದ್ರ ಸೇರಿದೆ. ಅದರಲ್ಲಿ 64 ಟಿಎಂಸಿ ನೀರನ್ನು ಹಿಡಿದಿಟ್ಟು ಈ ಭಾಗದ ಜನರ ಬದುಕು ಹಸನ ಮಾಡಲು, ಪ್ರತಿ ಕುಟುಂಬಕ್ಕೆ ಕುಡಿಯಲು ಕಾವೇರಿ ನೀರು ನೀಡಲು ನಾವು ತೀರ್ಮಾನಿಸಿದ್ದೇವೆ.

ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ನಾವು ಅನೇಕ ಯೋಜನೆಗಳನ್ನು ನೀಡಿದ್ದೇವೆ. ರಾಮನಗರ, ಮಾಗಡಿ, ಕುಣಿಗಲ್, ಕನಕಪುರ ಕ್ಷೇತ್ರಗಳಿಗೆ 1 ಸಾವಿರ ಕೋಟಿ ಅನುದಾನವನ್ನು ನೀರಾವರಿ ಯೋಜನೆಗಳಿಗೆ ನೀಡಿದ್ದೇವೆ. ರಾಮನಗರ ಟೌನ್ ನಲ್ಲಿ ಅರ್ಕಾವತಿ ನದಿಯ ಯೋಜನೆಗಳನ್ನು ರೂಪಿಸಿದ್ದೇವೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಬಿಡದಿಗೆ ಮೆಟ್ರೋ ಬರಬೇಕು. ಆನೇಕಲ್, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಕ್ಷೇತ್ರಗಳಲ್ಲಿ ನಮ್ಮ ಶಾಸಕರಿಲ್ಲ. ಈ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರಿಗೆ ರಕ್ಷಣೆ ಮಾಡಿ, ಅನೇಕ ಯೋಜನೆಗಳನ್ನು ನೀಡಿದ್ದೇವೆ.

ಸುರೇಶ್ ನನ್ನ ತಮ್ಮ ಎನ್ನುವುದು ಪಕ್ಕಕ್ಕಿಡಿ. ಒಬ್ಬ ಸಂಸತ್ ಸದಸ್ಯನಿಗಿಂತ ಪಂಚಾಯ್ತಿ ಸದಸ್ಯನಂತೆ ನಿಮ್ಮ ಕೆಲಸ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದಿಂದ ದೇವೇಗೌಡರು, ಕುಮಾರಸ್ವಾಮಿ ಅವರು ಸೇರಿದಂತೆ ಅನೇಕರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅವರು ನಿಮ್ಮ ಹಳ್ಳಿಗೆ ಎಷ್ಟು ಬಾರಿ ಬಂದಿದ್ದಾರೆ, ನಿಮ್ಮ ಕಷ್ಟಗಳಿಗೆ ಯಾವ ರೀತಿ ಸ್ಪಂದಿಸಿದ್ದಾರೆ ಎಂಬುದನ್ನು ಅವರ ಆತ್ಮಸಾಕ್ಷಿ ಹಾಗೂ ನಿಮ್ಮ ಆತ್ಮ ಸಾಕ್ಷಿಗೆ ಬಿಡುತ್ತೇನೆ.

ಕುಮಾರಸ್ವಾಮಿಗೆ ಟಾಟಾ ಬೈ ಬೈ ಹೇಳಿ: ದಳದ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದು, ಅದರ ಬಗ್ಗೆ ನಾನು ಈಗ ಚರ್ಚೆ ಮಾಡುವುದಿಲ್ಲ. ದಳ ಈಗ ಎಲ್ಲಿದೆ? ಕುಮಾರಣ್ಣ ಇದೇ ಜಿಲ್ಲೆಯಿಂದ 2 ಬಾರಿ ಮುಖ್ಯಮಂತ್ರಿಯಾಗಿ ಈಗ ಈ ಜಿಲ್ಲೆ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ. ನೀವು ಅವರಿಗೆ ಟಾಟಾ ಗುಡ್ ಬೈ ಹೇಳಬೇಕು. ನೀವು ಯಾರಿಗೆ ಅಧಿಕಾರ ಕೊಟ್ಟಿದ್ದೀರಿ ಅವರು ನಿಮ್ಮನ್ನು ನಂಬದೇ ಪಕ್ಕದ ಕ್ಷೇತ್ರಕ್ಕೆ ಹೋಗಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಆ ಪಕ್ಷದ ನಾಯಕರಿಗೆ ನಂಬಿಕೆ ಇಲ್ಲ. ನಿಮ್ಮ ಪರವಾಗಿ ಕೆಲಸ ಮಾಡಲು ನಾನು ಸಿದ್ಧನಿ ದ್ದೇನೆ. ಅಧಿಕಾರ ನಮ್ಮ ಕೈಯಲ್ಲಿದೆ, ನಿಮ್ಮ ರಕ್ಷಣೆ ನಾವು ಮಾಡುತ್ತೇವೆ. ನೀವು ನಮ್ಮ ಜತೆ ಕೈಜೋಡಿಸಿ. ಐದು ಬೆರಳು ಸೇರಿ ಕೈ ಮುಷ್ಠಿಯಾ ಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿಹೋಯಿತು, ತೆನೆಯೊತ್ತ ಮಹಿಳೆ ತೆನೆ ಎಸೆದು ಬಿಜೆಪಿ ಸೇರಿಕೊಂಡಳು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು.

2013ರಲ್ಲೂ ಇದೇ ಪರಿಸ್ಥಿತಿ: ಡಿ.ಕೆ. ಸುರೇಶ್ ಅವರು ನಾಲ್ಕನೇ ಬಾರಿ ಸಂಸದರಾಗಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಕೆ. ಸುರೇಶ್ ಅವರನ್ನು ಅಭ್ಯರ್ಥಿಯಾಗಿ ನಾನಾಗಲಿ, ಶಾಸಕರಾಗಲಿ ಆಯ್ಕೆ ಮಾಡಲಿಲ್ಲ. ಅಂದು ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಾಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರು ಸುರೇಶ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು.

ಆಗಲೂ ಇದೇ ರೀತಿ ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರದಲ್ಲಿತ್ತು. ಬಿಜೆಪಿ ಹಾಗೂ ಜೆಡಿಎಸ್ ಇಬ್ಬರೂ ಸೇರಿ ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಅಂದಿನ ಕಾಲದಲ್ಲಿ ಕೇವಲ ಮೂವರು ಶಾಸಕರಿದ್ದರು. ಆಗ ಚುನಾವಣೆ ನಡೆದಾಗ ಈ ಕ್ಷೇತ್ರದ ಮಹಾಜನತೆ ಕಾರ್ಯಕರ್ತನಿಗೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಶಕ್ತಿ ತುಂಬಲು 1.31 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿದಿರಿ. ಇದು ಡಿ.ಕೆ. ಸುರೇಶ್ ಅವರ ಚುನಾವಣೆಯಲ್ಲ. ಈ ಕ್ಷೇತ್ರದ ಪ್ರತಿಯೊಬ್ಬ ಕಾರ್ಯಕರ್ತ ತಾನೇ ಅಭ್ಯರ್ಥಿ ಎಂದು ಹೋರಾಟ ಮಾಡುತ್ತಿರುವ ಚುನಾವಣೆ.

ಇಂದು ರಾಜ್ಯದಲ್ಲಿ ಬಲಿಷ್ಠವಾದ ಸರ್ಕಾರ ಇದೆ. ಕಳೆದ ಬಾರಿ ನಾವು ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕುಮಾರಸ್ವಾಮಿ ಅವರಿಗೆ ಬೇಷರತ್ತಾಗಿ ಬೆಂಬಲ ನೀಡಿ ಐದು ವರ್ಷಕ್ಕೆ ಮುಖ್ಯಮಂತ್ರಿ ಮಾಡಿದೆವು. ಕುಮಾರಣ್ಣ ಆ ಸರ್ಕಾರವನ್ನು ಉಳಿಸಿಕೊಳ್ಳಲಿಲ್ಲ. ಆ ಮೈತ್ರಿಗೆ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಪಕ್ಷದ ತೀರ್ಮಾನವನ್ನು ಒಪ್ಪಿ ನಾನು ಬೆಂಬಲವಾಗಿ ನಿಂತೆ. 1985ರಿಂದ ದೇವೇಗೌಡರ ಕುಟುಂಬದ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಆದರೂ ಪಕ್ಷದ ನಿರ್ದೇಶನಕ್ಕಾಗಿ ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರಕ್ಕೆ ಬೆಂಬಲವಾಗಿ ನಿಂತೆ.

ಈ ಜಿಲ್ಲೆಯ ಜನ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿತು. ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತು. ನೀವೆಲ್ಲರೂ ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಿರಿ. ನಂತರ ನಾವು ಅವರಿಗೆ ಬೆಂಬಲ ನೀಡಿ ಒಂದು ಬಾರಿ ಮುಖ್ಯ ಮಂತ್ರಿ ಮಾಡಿದೆವು. ಆದರೂ ಇಂದು ಅವರ ಕುಟುಂಬದ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಯಾವುದೇ ಬೇಸರವಿಲ್ಲ. ಈ ಹೋರಾಟ ನಮಗೆ ಹೊಸತಲ್ಲ. ಅಂದೂ ಹೋರಾಟ ಮಾಡಿದ್ದೆವು, ಇಂದೂ ಹೋರಾಟ ಮಾಡುತ್ತಿದ್ದೇವೆ.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ನೀವು ಅಧಿಕಾರ ಕೊಟ್ಟ ಪರಿಣಾಮ ಐದು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಇದರಿಂದ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ ನೀಡುತ್ತಿದ್ದಾರೆ. ಸೊನ್ನೆ ವಿದ್ಯುತ್ ಬಿಲ್ ಬರುತ್ತಿದೆ. ಎಲ್ಲರಿಗೂ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಅಕ್ಕಿ ಹಾಗೂ 5 ಕೆ.ಜಿ ಅಕ್ಕಿಯ ಹಣ ಸಿಗುತ್ತಿದೆ. ನಿರುದ್ಯೋಗ ಯುವಕರಿಗೆ 3 ಸಾವಿರ ನಿರುದ್ಯೋಗ ಭತ್ಯೆ ಸಿಗುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಐದು ನ್ಯಾಯ ಗ್ಯಾರಂಟಿ ಯೋಜನೆ:

ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಐದು ನ್ಯಾಯ ಯೋಜನೆಗಳಲ್ಲಿ ಒಟ್ಟು 25 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದಾರೆ. ಯುವ ನ್ಯಾಯದಲ್ಲಿ ನೇಮಕಾತಿ ಭರವಸೆ, ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಾನೂನು, ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಘೋಷಿಸಿದ್ದಾರೆ. ಮಹಿಳಾ ನ್ಯಾಯದಲ್ಲಿ ಮಹಾಲಕ್ಷ್ಮಿ ಯೋಜನೆ ಮೂಲಕ ಬಡ ಮಹಿಳೆಯರಿಗೆ ವಾರ್ಷಿಕವಾಗಿ 1 ಲಕ್ಷ ಪ್ರೋತ್ಸಾಹ ಧನ ಘೋಷಿಸಲಾಗಿದೆ. ರೈತರಿಗೆ ಕಿಸಾನ್ ನ್ಯಾಯದ ಮೂಲಕ ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಆಯೋಗ ಸ್ಥಾಪನೆ, ಜಿಎಸ್ ಟಿ ಮುಕ್ತ ಕೃಷಿ ಕ್ಷೇತ್ರ ಘೋಷಿಸಿದ್ದಾರೆ. ಶ್ರಮಿಕ ನ್ಯಾಯದ ಮೂಲಕ ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದ್ದಾರೆ.

ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳನ್ನು ಲೇವಡಿ ಮಾಡಿತು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡಿದಾಗ ರಾಜ್ಯದ ಪರವಾಗಿ ಧ್ವನಿ ಎತ್ತಿದ್ದೇ ಡಿ.ಕೆ. ಸುರೇಶ್. ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮಾಡಿದರು.

ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ಗ್ಯಾರಂಟಿ ಅಲೆಯಿದೆ. ಕಾಂಗ್ರೆಸ್ ಅಲೆ, ಸುರೇಶ್ ಅಲೆ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರ ಅಲೆ ಇದೆ. ನೀವು ನನ್ನನ್ನು 1.21 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದಿರಿ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಮೂವರು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿದ್ದೀರಿ. ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಹಾಗೂ ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ ನೀವು ಡಿ.ಕೆ. ಸುರೇಶ್ ಅವರನ್ನು 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಬೇಕು.

Leave a Comment

Advertisements

Recent Post

Live Cricket Update