Advertisements

ರಸೆಲ್ ಆರ್ಭಟಕ್ಕೆ ಆರ್‌.ಸಿ.ಬಿ ಸವಾಲೇ ?

ಬೆಂಗಳೂರು: ಶುಕ್ರವಾರ ಆತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೋಲ್ಕತಾ ನೈಟ್‌ ರೈಡರ್ಸ್‌ ನಡುವೆ ಮಹತ್ವದ ಐಪಿಎಲ್‌ ಮುಖಾಮುಖೀ ನಡೆಯಲಿದೆ.

ವಿರಾಟ್‌ ಕೊಹ್ಲಿ ತಮ್ಮ ಎಂದಿನ ಶೈಲಿಯ ಬ್ಯಾಟಿಂಗ್‌ಗೆ ಮರಳಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಸ್ಫೋಟಕ 77 ರನ್‌ ಗಳಿಸಿದ್ದಾರೆ. ತಂಡದ ಮುಂದಿರುವ ಸವಾಲುಗಳು ದೊಡ್ಡದೇ ಇವೆ. ಮುಖ್ಯವಾಗಿ ನಾಯಕ ಫಾ ಡು ಪ್ಲೆಸಿಸ್‌, ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ರಜತ್‌ ಪಾಟಿದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮಿನುಗಿಲ್ಲ. ಇದು ಹೀಗೆಯೇ ಮುಂದುವರಿದರೆ ಅಪಾಯ ಕಟ್ಟಿಟ್ಟಿದ್ದು.

ಬೌಲಿಂಗ್‌ನಲ್ಲಿ ಅಲ್ಜಾರಿ ಜೋಸೆಫ್ ನಿರೀಕ್ಷಿತ ಪರಿಣಾಮ ಬೀರಿಲ್ಲ. ಅವರ ಜಾಗದಲ್ಲಿ ಇಂಗ್ಲೆಂಡಿನ ರೀಸ್‌ ಟಾಪ್ಲೆ ಕಣಕ್ಕಿಳಿಯುವ ಸಾಧ್ಯತೆ ಯಿದೆ. ಮೊಹಮ್ಮದ್‌ ಸಿರಾಜ್‌, ಯಶ್‌ ದಯಾಳ್‌ ಉತ್ತಮ ಬೌಲಿಂಗ್‌ ಮಾಡಿರುವುದರಿಂದ ಸ್ವಲ್ಪ ಸಮಾಧಾನವಿದೆ.

ಕೋಲ್ಕತಾ ಮೊದಲ ಪಂದ್ಯದಲ್ಲಿ ಹೈದರಾಬಾದ್‌ ತಂಡವನ್ನು 4 ರನ್ನುಗಳಿಂದ ರೋಚಕವಾಗಿ ಸೋಲಿಸಿದೆ. ಇಲ್ಲಿ ತಂಡ ಗೆದ್ದಿದ್ದರೂ ಕೆಕೆಆರ್‌ನ ಹಲವು ದೌರ್ಬಲ್ಯಗಳು ಹೊರಬಿದ್ದಿವೆ. ಮುಖ್ಯವಾಗಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌, ವೆಂಕಟೇಶ್‌ ಅಯ್ಯರ್‌, ನಿತೀಶ್‌ ರಾಣಾ ಬ್ಯಾಟಿಂಗ್‌ನಲ್ಲಿ ಸಿಡಿಯಬೇಕಿದೆ. ಶ್ರೇಯಸ್‌ಗೆ ಬೆಂಗಳೂರು ಮೆಚ್ಚಿನ ತಾಣವಾಗಿರುವುದರಿಂದ ಲಯಕ್ಕೆ ಮರಳಲು ಉತ್ತಮ ಅವಕಾಶವಾಗಿದೆ. ಬೌಲಿಂಗ್‌ನಲ್ಲಿ ವರುಣ್‌ ಚಕ್ರವರ್ತಿ, ಐಪಿಎಲ್‌ ಇತಿಹಾಸದ ದುಬಾರಿ ಆಟಗಾರ ಮಿಚೆಲ್‌ ಸ್ಟಾರ್ಕ್‌ ಹಿಂದಿನ ಪಂದ್ಯದಲ್ಲಿ ವೈಫ‌ಲ್ಯ ಕಂಡಿದ್ದಾರೆ. ಈ ಬಾರಿ ಮಿನುಗಬೇಕಿದೆ. ಸುನೀಲ್‌ ನಾರಾಯಣ್‌, ಆಯಂಡ್ರೆ ರಸೆಲ್‌ ತಮ್ಮ ಕೈಚಳಕ ತೋರಬೇಕಿದೆ.

ಚಿನ್ನಸ್ವಾಮಿ ಮೈದಾನ ಚಿಕ್ಕದಾಗಿರುವು ದರಿಂದ ಭಾರೀ ಪ್ರಮಾಣದ ರನ್‌ ಹರಿದು ಬರುವುದು ಸಾಮಾನ್ಯ. ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವ ಸವಾಲಿರುತ್ತದೆ. ಸಾಮಾನ್ಯವಾಗಿ ಚಿನ್ನಸ್ವಾಮಿ ಸ್ನೇಹಿ ಪಿಚ್‌. ಕಳೆದ ಪಂದ್ಯದಲ್ಲಿ ಸ್ಪಿನ್ನರ್‌ಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದರು. ರನ್‌ ಬೆನ್ನತ್ತಿದ ಆರ್‌ಸಿಬಿ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು

ಬೆಂಗಳೂರು: ಪ್ಲೆಸಿಸ್‌ (ನಾಯಕ), ಕೊಹ್ಲಿ, ಪಾಟಿದಾರ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ಕಾರ್ತಿಕ್‌, ರಾವತ್‌, ಡಾಗರ್‌, ಜೋಸೆಫ್/ಟಾಪ್ಲೆ, ಸಿರಾಜ್‌, ದಯಾಳ್‌.
ಕೆಕೆಆರ್‌: ಸಾಲ್ಟ್, ಎಸ್‌.ನಾರಾಯಣ್‌, ವಿ.ಅಯ್ಯರ್‌, ಶ್ರೇಯಸ್‌ (ನಾಯಕ), ನಿತೀಶ್‌, ರಮಣ್‌ದೀಪ್‌, ರಿಂಕು, ರಸೆಲ್‌, ಸ್ಟಾರ್ಕ್‌, ಹರ್ಷಿತ್‌, ಚಕ್ರವರ್ತಿ.

Leave a Comment

Advertisements

Recent Post

Live Cricket Update