ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ತಮ್ಮ ಪತಿಯ ಸ್ಥಾನವನ್ನು ವಹಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಸುನಿತಾ ವಿರುದ್ಧ ಹರಿಹಾಯ್ದ ಹರ್ದೀಪ್ ಪುರಿ, “ಸುನೀತಾ ತಮ್ಮ ಸಹೋದ್ಯೋಗಿಗಳನ್ನು ಪ್ರತ್ಯೇಕಿಸಿದ್ದಾರೆ.
ಮೇಡಂ ಅವರು ಹುದ್ದೆಯನ್ನು ವಹಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ರಾಬ್ರಿ ದೇವಿ ಕೂಡ ಬಿಹಾರದಲ್ಲಿ ಅದೇ ರೀತಿ ಮಾಡಿದ್ದಾರೆ” ಎಂದು ತಿಳಿಸಿದರು.
ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಬಳಿಕ ಸುನೀತಾ ಕೇಜ್ರಿವಾಲ್ ಅವರು ತಮ್ಮ ಪತಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅದೇ ಕುರ್ಚಿಯಲ್ಲೇ ಕುಳಿತು ಪತ್ರಿಕಾಗೋಷ್ಠಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಸುನೀತಾ ಕೇಜ್ರಿವಾಲ್ ಅವರು ರಾಬ್ರಿ ದೇವಿ ಅವರ ಹಾದಿಯನ್ನೇ ಅನುಸರಿಸಬಹುದು ಎಂದು ಸುಳಿವು ನೀಡಿದ ಕೆಲವು ದಿನಗಳ ನಂತರ ಸುನೀತಾ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುತ್ತಾರೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಮಾ.21 ರಂದು ಬಂಧಿಸಿತ್ತು. ಪ್ರಸ್ತುತ ಅವರು ಕೇಂದ್ರ ತನಿಖಾ ಸಂಸ್ಥೆಯ ವಶದಲ್ಲಿದ್ದಾರೆ.